ವೇಶ್ಯಾವಾಟಿಕೆ ನಡೆಸುತ್ತಿದ್ದ 3 ಲಾಡ್ಜ್‌ಗಳ ಮೇಲೆ ದಾಳಿ- ವಿದೇಶಿ ಯುವತಿಯರ ರಕ್ಷಣೆ

Public TV
1 Min Read
CTD LODGE 1

ಚಿತ್ರದುರ್ಗ: ನಗರದ ಮೂರು ಲಾಡ್ಜ್‌ಗಳ ಮೇಲೆ ಪೊಲೀಸರು ದಾಳಿ ನಡೆಸಿ, 6 ಜನ ಆರೋಪಿಗಳನ್ನು ಬಂಧಿಸಿ, 6 ವಿದೇಶಿ ಯುವತಿಯರನ್ನು ರಕ್ಷಿಸಿದ್ದಾರೆ.

ಬಾಂಗ್ಲಾದೇಶದಿಂದ ಅಕ್ರಮವಾಗಿ ಸಾಗಾಟ ಮಾಡಲ್ಪಟ್ಟ ಯುವತಿಯರನ್ನು ಇರಿಸಿಕೊಂಡು ವೇಶ್ಯಾವಾಟಿಕೆ ನಡೆಸಲಾಗುತ್ತಿತ್ತು. ಇತ್ತೀಚೆಗೆ ಒಡನಾಡಿ ಸಂಸ್ಥೆಯು ಬಾಂಗ್ಲಾದೇಶದ ಬಾಲಕಿಯೊಬ್ಬಳನ್ನು ವಿಚಾರಿಸಿ, ವೇಶ್ಯಾವಾಟಿಕೆ ಜಾಲ ಪತ್ತೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿತ್ತು.

ನಗರದ ಆದರ್ಶ, ಅನುಗ್ರಹ ಮತ್ತು ರಾಜಧಾನಿ ಲಾಡ್ಜ್‌ಗಳಲ್ಲಿ ಬಾಂಗ್ಲಾದೇಶದ ಯುವತಿಯರನ್ನು ಇರಿಸಿ, ವೇಶ್ಯಾವಾಟಿಕೆ ನಡೆಸಲಾಗುತ್ತಿದೆ ಎನ್ನುವ ಮಾಹಿತಿಯನ್ನು ಇಂದು ಡಿವೈಎಸ್‍ಪಿ ಸಂತೋಷ್ ಖಚಿತ ಪಡಿಸಿಕೊಂಡಿದ್ದರು. ಅವರ ನೇತೃತ್ವದಲ್ಲಿ ಮೂರು ತಂಡಗಳನ್ನು ರಚಿಸಿ 3 ಲಾಡ್ಜ್‌ಗಳ ಮೇಲೆ ಏಕಕಾಲಕ್ಕೆ ದಾಳಿ ಮಾಡಿದ್ದರು.

CTD LODGE

ದಾಳಿಯಲ್ಲಿ ಅಕ್ರಮವಾಗಿ ದೇಶದ ಒಳಗೆ ನುಸುಳಿ ಬಂದಿರುವ ಬಾಂಗ್ಲಾದೇಶ ಮೂಲದ 6 ಜನ ಯುವತಿಯರನ್ನು ರಕ್ಷಿಸಿದ ಪೊಲೀಸರು, ಸ್ಥಳದಲ್ಲಿಯೇ 3 ಜನರನ್ನು ಬಂಧಿಸಿದ್ದರು. ಬಳಿಕ ಆರೋಪಿಗಳನ್ನು ವಿಚಾರಣೆಗೆ ಒಳಪಡಿಸಿ ಮತ್ತೇ ಮೂವರನ್ನು ಬಂಧಿಸಿದ್ದಾರೆ. ಲಾಡ್ಜ್‌ಗಳ ಮಾಲೀಕರು ಲಾಡ್ಜ್‌ನ ಸ್ನಾನದ ಕೊಠಡಿ ಹಾಗೂ ರೂಮ್‍ಗಳ ಕಿಂಡಿಗಳಲ್ಲಿ ಯುವತಿಯರನ್ನು ಬಚ್ಚಿಟ್ಟು, ವೇಶ್ಯವಾಟಿಕೆ ನಡೆಸುತ್ತಿದ್ದರು ಎನ್ನುವ ಮಾಹಿತಿ ಸಿಕ್ಕಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಎರಡು ವರ್ಷಗಳ ಹಿಂದೆ ವೇಶ್ಯಾವಾಟಿಕೆ ನಡೆಸುತ್ತಿದ್ದ ಅನುಗ್ರಹ ಲಾಡ್ಜ್‌ನ ಮೇಲೆ ಪೊಲೀಸರು ದಾಳಿ ನಡೆಸಿ, ಲಾಡ್ಜ್‌ನನ್ನು ಸೀಜ್ ಮಾಡಿದ್ದರು. ಮೊದಲೆಲ್ಲ ವಿವಿಧ ರಾಜ್ಯಗಳಿಂದ ಮಹಿಳೆಯನ್ನು ಕರೆತಂದು ವೇಶ್ಯಾವಾಟಿಕೆಗೆ ಬಳಕೆ ಮಾಡಿಕೊಳ್ಳಲಾಗುತ್ತಿತ್ತು ಎಂಬ ಆರೋಪಗಳು ಕೇಳಿ ಬಂದಿದ್ದವು. ಜಿಲ್ಲೆಯಲ್ಲಿ ಇದೇ ಮೊದಲ ಬಾರಿಗೆ ಬಾಂಗ್ಲಾದೇಶದ ಮಹಿಳೆಯರನ್ನು ಲಾಡ್ಜ್ ಮಾಲೀಕರು ಇರಿಸಿಕೊಂಡು ದಂಧೆ ನಡೆಸುತ್ತಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಒಟ್ಟು 6 ಜನರನ್ನು ಬಡಾವಣೆ ಠಾಣೆ ಪೊಲೀಸರು ಬಂಧಿಸಿ, ವಿಚಾರಣೆ ನಡೆಸುತ್ತಿದ್ದಾರೆ. ವೇಶ್ಯಾವಾಟಿಕೆ ಹಿಂದೆ ದೊಡ್ಡ ಜಾಲವೇ ಇದೆ ಎನ್ನುವ ಶಂಕೆ ವ್ಯಕ್ತವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *