– ಇತ್ತ ದೇವಾಲಯ ಮುಂಭಾಗದವರೆಗೂ ನೀರು
ದಾವಣಗೆರೆ: ತುಂಗಾಭದ್ರಾ ನದಿ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಜಿಲ್ಲೆಯ ಹರಿಹರ ತಾಲೂಕಿನ ಉಕ್ಕಡಗಾತ್ರಿಯ ಅಜ್ಜಯ್ಯನ ದೇವಸ್ಥಾನ ಮುಂಭಾಗದವರೆಗೂ ನೀರು ಬಂದಿದೆ.
ತುಂಗಾ ಹಾಗೂ ಭದ್ರಾ ನದಿಯ ನೀರು ಹೆಚ್ಚಾಗಿದ್ದು, ಬಳ್ಳಾರಿ ಸಮೀಪದ ಟಿಬಿ ಡ್ಯಾಂಗೆ ನೀರು ಬಿಡಲಾಗುತ್ತಿದೆ. ಆದರೆ ಕಳೆದ ಎರಡು ದಿನಗಳಿಂದ ನೀರಿನ ಹರಿವು ಜೋರಾಗಿದೆ. ಇದರ ಪರಿಣಾಮ ಉಕ್ಕಡಗಾತ್ರಿ ಅಜ್ಜಯ್ಯನ ದೇವಸ್ಥಾನದ ಮುಂಭಾಗದವರೆಗೂ ನೀರು ನಿಂತಿದ್ದು, ಸಾಕಷ್ಟು ಅಂಗಡಿ ಶೆಡ್ ಗಳು ಮುಳುಗಡೆಗೊಂಡಿವೆ.
ಪ್ರತಿನಿತ್ಯ ನೂರಾರು ಭಕ್ತರು ಬಂದು ದೇವರ ದರ್ಶನ ಪಡೆಯುತ್ತಿದ್ದರು. ಅದರಲ್ಲೂ ಅಮಾವಾಸ್ಯೆ ದಿನದಂದು ಸಾವಿರಾರು ಭಕ್ತರು ಹೊಳೆಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಾರೆ. ಆದರೆ ಹೊಳೆಯಲ್ಲಿ ಸ್ನಾನ ಮಾಡುವಾಗ ಯಾವುದೇ ರೀತಿಯ ಸೂಚನಾ ಫಲಕಗಳು ಹಾಕಿಲ್ಲ. ಇದರಿಂದ ಭಯದ ವಾತಾವರಣದಲ್ಲಿ ಭಕ್ತರು ಹೊಳೆಯಲ್ಲಿ ಸ್ನಾನ ಮಾಡಿ ದೇವರ ದರ್ಶನ ಪಡೆಯುತ್ತಿದ್ದಾರೆ.
ತುಂಗಾಭದ್ರಾ ನದಿಯ ನೀರಿನ ಮಟ್ಟ ಹೆಚ್ಚಾದ ಪರಿಣಾಮ ಹರಿಹರ ತಾಲೂಕಿನ ಉಕ್ಕಡಗಾತ್ರಿ ಗ್ರಾಮಕ್ಕೆ ಸಂಪರ್ಕ ಹೊಂದುವ ರಸ್ತೆ ಸಂಪೂರ್ಣ ಮುಳುಗಡೆಗೊಂಡಿದೆ. ಹರಿಹರದಿಂದ ಉಕ್ಕಡಗಾತ್ರಿಗೆ ಇದೊಂದೆ ರಸ್ತೆ ಇದ್ದು ರಸ್ತೆಯ ಸೇತುವೆ ಮುಳುಗಡೆಗೊಂಡಿದೆ. ಗ್ರಾಮಕ್ಕೆ ಹೋಗಬೇಕು ಎಂದರೆ ಎಂಟು ಕಿ.ಮೀ ಸುತ್ತಿಕೊಂಡು ಬರಬೇಕಾದ ಪರಿಸ್ಥಿತಿ ಎದುರಾಗಿದೆ. ಹಲವು ಬಾರಿ ಸಚಿವರಿಗೆ ಮತ್ತು ಶಾಸಕರಿಗೆ ಸಮಸ್ಯೆ ಬಗ್ಗೆ ಮನವರಿಕೆ ಮಾಡಿದರು ಯಾವುದೇ ಪ್ರಯೋಜನವಾಗಿಲ್ಲ ಅಂತ ಸ್ಥಳೀಯರು ದೂರಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews