ಸಾರಥಿಯಂಥಾ ಸೂಪರ್ ಹಿಟ್ ಚಿತ್ರ ಕೊಟ್ಟಿದ್ದ ದಿನಕರ್ ತೂಗುದೀಪ ಅವರ ನಿರ್ದೇಶನದ ನಾಲ್ಕನೇ ಚಿತ್ರ ಲೈಫ್ ಜೊತೆ ಒಂದ್ ಸೆಲ್ಫಿ. ಲವ್ಲಿ ಸ್ಟಾರ್ ಪ್ರೇಮ್, ಪ್ರಜ್ವಲ್ ದೇವರಾಜ್ ಮತ್ತು ಹರಿಪ್ರಿಯಾ ಮುಖ್ಯಭೂಮಿಕೆಯಲ್ಲಿರುವ ಈ ಚಿತ್ರದ ಕಥೆ ಏನೆಂಬ ಬಗ್ಗೆ ಎಲ್ಲೆಡೆ ಕುತೂಹಲ ಹರಡಿಕೊಂಡಿದೆ. ಇದೇ ಹೊತ್ತಿನಲ್ಲಿ ಈ ಚಿತ್ರದ ಕಥೆ ಹುಟ್ಟಿದ ಮಜವಾದ ಕಥೆಯ ಬಗ್ಗೆ ದಿನಕರ್ ಅವರು ಕೆಲ ವಿಚಾರಗಳನ್ನು ಬಿಚ್ಚಿಟ್ಟಿದ್ದಾರೆ!
ಲೈಫ್ ಜೊತೆ ಒಂದ್ ಸೆಲ್ಫಿ ಚಿತ್ರಕ್ಕೆ ಕಥೆ ಬರೆದಿದ್ದು ದಿನಕರ್ ಅವರ ಮಡದಿ ಮಾನಸಾ ಎಂಬುದು ಎಲ್ಲರಿಗೂ ಗೊತ್ತಿರೋ ವಿಚಾರ. ದಿನಕರ್ ಎಲ್ಲ ರೀತಿಯಿಂದಲೂ ತಮ್ಮನ್ನು ಕಾಡಿ ಕೈ ಹಿಡಿದೆಬ್ಬಿಸೋ ಕಥೆಯೊಂದು ಸಿಗದ ಹೊರತಾಗಿ ನಿರ್ದೇಶನಕ್ಕಿಳಿಯುವವರಲ್ಲ. ಒಂದು ದೊಡ್ಡ ಗ್ಯಾಪಿನಲ್ಲಿ ಅಂಥಾದದ್ದೊಂದು ನಿರೀಕ್ಷೆ ಹೊಂದಿದ್ದ ದಿನಕರ್ ಅವರಿಗೆ ಮಾನಸಾ ಈ ಚಿತ್ರದ ಕಥೆಯ ಎಳೆಯೊಂದನ್ನು ಹೇಳಿದ್ದು ಈಗ್ಗೆ ಒಂದೂವರೆ ವರ್ಷಗಳ ಹಿಂದೆ!
ಈ ಕಥಾ ಎಳೆ ಕೇಳಿದಾಕ್ಷಣ ಏನೋ ಛಳುಕು ಮೂಡಿದಂತಾಗಿ ತಕ್ಷಣವೇ ಅವರು ಮಾನಸಾರ ಜೊತೆ ಸೇರಿ ಕಥೆಗೊಂದು ರೂಪ ಕೊಡಲಾರಂಭಿಸಿದ್ದರು. ಅಖಂಡ ಆರೇಳು ತಿಂಗಳು ಕಳೆದ ನಂತರ ಕಥೆಗೊಂದು ಸ್ಪಷ್ಟವಾದ ರೂಪ ಬಂದಿತ್ತು. ಆ ನಂತರ ಮತ್ತೆ ಆರು ತಿಂಗಳು ಪಟ್ಟಾಗಿ ಕೂತ ದಿನಕರ್ ಅವರೇ ಸ್ಕ್ರೀನ್ ಪ್ಲೇ ರಚಿಸಿದ್ದರು. ಮಾನಸಾ ಕೂಡಾ ಅದಕ್ಕೆ ಸಹಕರಿಸಿದ್ದರು. ಹೀಗೆ ಸ್ಕ್ರೀನ್ ಪ್ಲೇ ರೆಡಿಯಾದಾಕ್ಷಣವೇ ನಿರ್ಮಾಪಕರನ್ನು ಭೇಟಿಯಾದಾಗ ಅವರು ಈ ಚಿತ್ರ ನಿರ್ಮಾಣಕ್ಕೆ ಒಪ್ಪಿಕೊಳ್ಳಲು ತೆಗೆದುಕೊಂಡಿದ್ದು ಕೇವಲ ಎರಡು ನಿಮಿಷವಂತೆ!
ಆ ನಂತರದಲ್ಲಿ ಚಿತ್ರೀಕರಣ ಶುರು ಮಾಡಿದಾಗಲೂ ಚಿತ್ರದುದ್ದಕ್ಕೂ ಕಥೆ ಬರೆದ ಮಾನಸಾ ಸಾಥ್ ನೀಡಿದ್ದಾರೆ. ತಮ್ಮ ಕಥೆ ದೃಶ್ಯವಾಗೋದನ್ನು ಥ್ರಿಲ್ ಆಗುತ್ತಲೇ ಕಣ್ತುಂಬಿಕೊಂಡಿದ್ದಾರೆ. ಕಡೆಗೆ ಎಡಿಟಿಂಗ್ ಎಲ್ಲ ಆದ ನಂತರ ನೋಡಿ ಹಿರಿ ಹಿರಿ ಹಿಗ್ಗಿದ್ದಾರಂತೆ. ಒಟ್ಟಾರೆಯಾಗಿ ಈ ಚಿತ್ರದ ಉದ್ದಕ್ಕೂ ದಿನಕರ್ ಅವರ ಮಡದಿ ಮಾನಸಾ ಪ್ರಮುಖ ಪಾತ್ರ ವಹಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews