ಮಗ್ಳನ್ನು ಬರ್ತ್ ಡೇಗೆ ಕಳಿಸಿಲ್ಲವೆಂದು ಟೆಡ್ಡಿ ಬೇರ್ ನಿಂದ ಆಂಟಿಯನ್ನೇ ಸಾಯಿಸಿದ ಬಾಲಕ!

Public TV
3 Min Read
CHENNAI MURDER 1

ಚೆನ್ನೈ: 15 ವರ್ಷದ ಬಾಲಕನೊಬ್ಬ ತನ್ನ ಸ್ವಂತ ಆಂಟಿಯನ್ನೇ ಟೆಡ್ಡಿ ಬೇರ್ ಬಳಸಿ ಉಸಿರುಗಟ್ಟಿ ಸಾಯಿಸಿದ ಘಟನೆ ಅಮಿಂಜಿಕರೈ ಎಂಬಲ್ಲಿ ನಡೆದಿದೆ. ಕೊಲೆ ಮಾಡಿದ ಬಳಿಕ ಇದು ಆತ್ಮಹತ್ಯೆ ಎಂದು ಬಿಂಬಿಸಲು ಆಂಟಿಯ ಕೈಯ ನರವನ್ನೇ ಹರಿತವಾದ ಚಾಕುವಿನಿಂದ ಕತ್ತರಿಸಿದ್ದಾನೆ. ಇದರಿಂದಾಗಿ ಆಕೆಯ ದೇಹದಿಂದ ಅಪಾರ ಪ್ರಮಾಣದ ರಕ್ತಸ್ರಾವವಾಗಿದೆ. ಆದರೆ ಬಾಲಕನ ದುರಾದೃಷ್ಟಕ್ಕೆ ಆತ ಮನೆಯೊಳಗೆ ಹೋಗಿ, ವಾಪಸ್ ಬಂದ ದೃಶ್ಯ ಸಿಸಿ ಟಿವಿ ಕ್ಯಾಮರಾದಲ್ಲಿ ಸೆರೆಯಾಗಿದ್ದ ಕಾರಣ ಈಗ ಸಿಕ್ಕಿಬಿದ್ದಿದ್ದಾನೆ.

ಯಾರು, ಏನಾಯ್ತು?:
ಅಮಿಂಜಿಕರೈನ ವೆಲ್ಲಾಲಾರ್ ಬೀದಿಯಲ್ಲಿ ಶಂಕರ್ ಸುಬ್ಬು ಹಾಗೂ ತಮಿಳ್ ಸೆಲ್ವಿ (35) ದಂಪತಿ ವಾಸವಾಗಿದ್ದರು. ಶಂಕರ್‍ಸುಬ್ಬು ದಿನಸಿ ಅಂಗಡಿ ಇಟ್ಟುಕೊಂಡಿದ್ದರು. ಈ ದಂಪತಿಗೆ ಇಬ್ಬರು ಮಕ್ಕಳಿದ್ದಾರೆ. ಕಳೆದ ಗುರುವಾರ ಮಧ್ಯಾಹ್ನ ಅಂಗಡಿಯಿಂದ ವಾಪಸ್ ಬಂದ ಸುಬ್ಬುವಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪತ್ನಿ ತಮಿಳ್ ಸೆಲ್ವಿ ಕಾಣಿಸಿದ್ದಾರೆ. ತಕ್ಷಣ ಅವರನ್ನು ಆಸ್ಪತ್ರೆಗೆ ಕರೆದೊಯ್ದರೂ, ಆಕೆ ಸಾವನ್ನಪ್ಪಿದ್ದಾರೆ ಎಂದು ವೈದ್ಯಾಧಿಕಾರಿಗಳು ತಿಳಿಸಿದ್ದಾರೆ. ಈ ಘಟನೆ ಸಂಬಂಧ ಅಮಿಂಜಿಕರೈ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

CHENNAI MURDER 2

ಸಾಕ್ಷಿಯಾಗಿ ಸಿಕ್ಕಿತ್ತು ಸಿಸಿಟಿವಿ ದೃಶ್ಯ!
ದೂರು ಸ್ವೀಕರಿಸಿದ ತಕ್ಷಣ ಕಾರ್ಯಾಚರಣೆಗಿಳಿದ ಸಹಾಯಕ ಪೊಲೀಸ್ ಆಯುಕ್ತ ಗುಣಶೇಖರನ್ ಹಾಗೂ ಇನ್ಸ್ ಪೆಕ್ಟರ್ ಪೆರುಂದುರೇ ಮುರುಗನ್ ಆ ಪ್ರದೇಶದಲ್ಲಿದ್ದ ಎಲ್ಲಾ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಿದ್ದಾರೆ. ಇದರ ಪರಿಶೀಲನೆ ವೇಳೆ 15 ವರ್ಷ ಬಾಲಕನೊಬ್ಬ ತಮಿಳ್ ಸೆಲ್ವಿ ಮನೆಯೊಳಗೆ ಹೋಗುತ್ತಿದ್ದ ದೃಶ್ಯಾವಳಿ ಸಿಕ್ಕಿದೆ. ಗುರುವಾರ ಬೆಳಗ್ಗೆ 11.00 ಗಂಟೆಗೆ ಮನೆಯೊಳಗೆ ಹೋಗಿದ್ದ ಬಾಲಕ ಸರಿಯಾಗಿ 11.25ಕ್ಕೆ ಮನೆಯಿಂದ ವಾಪಸ್ಸಾಗುತ್ತಿದ್ದ ವಿಚಾರ ಬೆಳಕಿಗೆ ಬಂದಿದೆ. ಈ ದೃಶ್ಯವನ್ನು ಪೊಲೀಸರು ತೋರಿಸಿದಾಗ ಮಹಿಳೆಯ ಪತಿ ಶಂಕರ್ ಸುಬ್ಬು ಆ ಬಾಲಕ ತನ್ನ ಸೋದರಳಿಯ ಎಂದು ಪತ್ತೆ ಹಚ್ಚಿದ್ದಾರೆ.

CHENNAI MURDER 4

ಅಂತ್ಯಕ್ರಿಯೆಗೂ ಬಂದಿದ್ದ!
ಇಷ್ಟೆಲ್ಲಾ ಕಿರಾತಕ ಕೃತ್ಯ ನಡೆಸಿದ್ದ 10ನೇ ತರಗತಿ ಓದುತ್ತಿದ್ದ ಬಾಲಕ ಅತ್ತೆಯ ಅಂತ್ಯಕ್ರಿಯೆಗೂ ಆಗಮಿಸಿದ್ದ. ಎಲ್ಲಾ ಮುಗಿದ ಮೇಲೆ ಪೊಲೀಸರು ಬಾಲಕನ ವಿಚಾರಣೆ ಶುರು ಮಾಡಿದಾಗ ಆತ ನಾನು ಸುತ್ತಿಗೆ ತೆಗೆದುಕೊಂಡು ಹೋಗಲು ಬಂದಿದ್ದೆ ಎಂದು ಕತೆ ಹೇಳಲು ಶುರುವಿಟ್ಟುಕೊಂಡಿದ್ದಾನೆ. ಆದರೆ ಯಾವಾಗ ತನಿಖೆ ತೀವ್ರವಾಯಿತೋ ಆತ ತಡವರಿಸೋಕೆ ಶುರು ಮಾಡಿದ. ಕೊನೆಗೆ ತಾನೇ ಕೃತ್ಯ ನಡೆಸಿದ್ದಾಗಿ ತಪ್ಪೊಪ್ಪಿಕೊಂಡಿದ್ದಾನೆ. ನಾನು ತಮಿಳ್ ಸೆಲ್ವಿ ಪುತ್ರಿಯ ಜೊತೆ ಸ್ನೇಹದಿಂದಿದ್ದೆ. ಆದರೆ ತಮಿಳ್ ಸೆಲ್ವಿಗೆ ಇದು ಇಷ್ಟವಿರಲಿಲ್ಲ. ಹೀಗಾಗಿ ನಾನು ಈ ಕೃತ್ಯವೆಸಗಿದ್ದೇನೆ ಎಂದು ಪೊಲೀಸರ ಮುಂದೆ ಬಾಯಿಬಿಟ್ಟಿದ್ದಾನೆ.

CHENNAI MURDER 3

ಬರ್ತ್ ಡೇಗೆ ಬಾರದ್ದಕ್ಕೆ ಸಿಟ್ಟು!
ವಾರದ ಹಿಂದಷ್ಟೇ ಬಾಲಕನ ಬರ್ತ್ ಡೇ ಇತ್ತು. ಹೀಗಾಗಿ ಈ ಸಂಭ್ರಮದಲ್ಲಿ ಭಾಗಿಯಾಗಲು ಬಾಲಕ ತಮಿಳ್ ಸೆಲ್ವಿಯ 13 ವರ್ಷದ ಪುತ್ರಿಯನ್ನೂ ಆಹ್ವಾನಿಸಿದ್ದ. ಆದರೆ ತಮಿಳ್ ಸೆಲ್ವಿ ಅನುಮತಿ ಕೊಡದ ಹಿನ್ನೆಲೆಯಲ್ಲಿ ಆಕೆ ಬರ್ತ್ ಡೇ ದಿನ ಬಂದಿರಲಿಲ್ಲ. ಹೀಗಾಗಿ ಆಕೆಯ ಮೊಬೈಲ್ ಗೆ ಯಾಕೆ ಬಂದಿಲ್ಲ ಎಂದು ಮೆಸೇಜ್ ಮಾಡಿದ್ದಾನೆ. ಮೆಸೇಜ್ ಸಿಕ್ಕುತ್ತಿದ್ದಂತೆಯೇ ಫೋನ್ ಮಾಡಿದ ಬಾಲಕಿಯ ತಾಯಿ ತಮಿಳ್ ಸೆಲ್ವಿ. ನನ್ನ ಮಗಳ ಸಹವಾಸಕ್ಕೆ ಬರಬೇಡ. ಆಕೆಯಿಂದ ದೂರವಿರು ಎಂದು ಎಚ್ಚರಿಸಿದ್ದಾರೆ.

CHENNAI MURDER 6

ಈ ಘಟನೆ ಬಳಿಕ ಬಾಲಕ ಫುಲ್ ಸಿಟ್ಟಿಗೆದ್ದು ತಮಿಳ್ ಸೆಲ್ವಿ ಮೇಲೆ ದ್ವೇಷ ಸಾಧನೆಗೆ ಹೊಂಚುಹಾಕುತ್ತಿದ್ದ. ಘಟನೆ ನಡೆದ ದಿನ ಬೆಳಗ್ಗೆ ತಮಿಳ್ ಸೆಲ್ವಿ ಬಾಗಿಲಿನ ಚಿಲಕ ಹಾಕದೇ ನಿದ್ದೆಗೆ ಜಾರಿದ್ದರು. ಈ ಹೊತ್ತಲ್ಲಿ ಮನೆಗೆ ಆಗಮಿಸಿದ ಬಾಲಕ ಮನೆಯಲ್ಲಿದ್ದ ಟೆಡ್ಡಿ ಬೇರ್ ತೆಗೆದುಕೊಂಡು ಮುಖಕ್ಕೆ ಒತ್ತಿದ್ದಾನೆ. ಇದರಿಂದ ಬಿಡಿಸಿಕೊಳ್ಳಲು ಯತ್ನಿಸಿದರೂ ಉಸಿರುಗಟ್ಟಿ ಆಕೆ ಅಲ್ಲೇ ಸಾವನ್ನಪ್ಪಿದ್ದಾಳೆ. ಆದರೆ ಇದೊಂದು ಕೊಲೆ ಎಂದು ಗೊತ್ತಾಗಬಾರದು ಎಂದು ಬಾಲಕ ತಾನು ಬಯಾಲಜಿಯಲ್ಲಿ ಕಲಿತಿದ್ದ ಪಾಠದಂತೆ ತನ್ನ ಆಂಟಿಯ ಎಡಗೈಯ ನರವನ್ನು ಚಾಕುವಿನಿಂದ ಕತ್ತರಿಸಿದ್ದಾನೆ. ಇದರಿಂದ ಆಕೆಗೆ ರಕ್ತಸ್ರಾವ ತೀವ್ರವಾಗಿದೆ. ಹೀಗೆ ಮಾಡೋದ್ರಿಂದ ಎಲ್ಲರೂ ಆಕೆ ಆತ್ಮಹತ್ಯೆ ಮಾಡಿದ್ದಾರೆ ಎಂದು ಭಾವಿಸುತ್ತಾರೆ ಎಂದು ಈ ರೀತಿ ಮಾಡಿದ್ದಾಗಿ ಪೊಲೀಸರ ಮುಂದೆ ಬಾಲಕ ತಪ್ಪೊಪ್ಪಿಕೊಂಡಿದ್ದಾನೆ. ಮಧ್ಯಾಹ್ನ ಊಟಕ್ಕೆ ಬಂದಿದ್ದ ಅಂಕಲ್ ರಕ್ತದ ಮಡುವಿನಲ್ಲಿ ಬಿದ್ದಿದ್ದ ತಮಿಳ್ ಸೆಲ್ವಿಯನ್ನು ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಪೊಲೀಸರು ಪ್ರಕರಣದ ವಿಚಾರಣೆ ಮುಂದುವರಿಸಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

CHENNAI MURDER 5

Share This Article
Leave a Comment

Leave a Reply

Your email address will not be published. Required fields are marked *