ಗದಗ: ವೃದ್ಧೆ ಆತ್ಮಹತ್ಯೆ ಮಾಡಿಕೋಂಡರೆಂದು ಶತ ಶತಮಾನಗಳಿಂದಲೂ ಗ್ರಾಮದ ಜನರ ಜೀವಜಲವಾಗಿದ್ದ ಕೆರೆ ನೀರನ್ನು ಮುಟ್ಟದೆ ಮೌಢ್ಯತೆ ಪ್ರದರ್ಶಿಸಿದ ಘಟನೆ ಗದಗ್ ನಲ್ಲಿ ನಡೆದಿದೆ.
ಗದಗ ಜಿಲ್ಲೆಯ ಹುಯಿಲಗೋಳ ಗ್ರಾಮದ ಸ್ಥಳೀಯರು ತುಂಬಿ ತುಳುಕುತ್ತಿರುವ ಕೆರೆ ನೀರನ್ನು ಖಾಲಿ ಮಾಡಿದ್ದಾರೆ. ಕಳೆದ ಒಂದು ವಾರದ ಹಿಂದೆ, ಕುಡಿಯುವ ನೀರಿನ ಈ ಕೆರೆಯಲ್ಲಿ ಸ್ಥಳಿಯ ಸುಮಾರು 60 ವರ್ಷದ ಮಹಿಳೆಯೊಬ್ಬರು ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು. ಮಹಿಳೆ ಕೆರೆಯಲ್ಲಿ ಮೃತ ಪಟ್ಟಿರುವುದರಿಂದ ಕೆರೆ ನೀರು ಮೈಲಿಗೆ ಆಗಿದೆ ಎಂಬ ಮನೋಭಾವ ಸ್ಥಳಿಯರಲ್ಲಿ ಮೂಡಿದೆ. ಆದ್ದರಿಂದ ಈ ಕೆರೆಯ ನೀರನ್ನು ಈಗ ಯಾರೂ ಉಪಯೋಗಿಸುತ್ತಿಲ್ಲ.
ಮೋಟಾರ್ ಬಳಸಿ ಕೆರೆ ಖಾಲಿ ಮಾಡ್ತಿದ್ದಾರೆ. ಇದರಿಂದ ಮೂರು ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಹುಯಿಲಗೋಳ ಗ್ರಾಮದಲ್ಲಿ ಕುಡಿಯುವ ನೀರಿನ ಜಲಕ್ಷಾಮ ಎದುರಾಗಿದೆ. ಸ್ಥಳಿಯ ಮುಖಂಡರು, ಗ್ರಾಮ ಪಂಚಾಯತ ಸದಸ್ಯರು ಈ ಕೆರೆ ಖಾಲಿ ಮಾಡಲು ತಿರ್ಮಾನಿಸಿರುವುದಾಗಿ ಗ್ರಾ.ಪಂ ಸದಸ್ಯ ಬಸವರಾಜ್ ಹೇಳಿದ್ದಾರೆ.
22 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆ ಸದ್ಯ ಖಾಲಿಯಾಗುತ್ತಿದೆ. ಈ ಕೆರೆ ತುಂಬಿದ್ರೆ ಗ್ರಾಮದ ಜನರಿಗೆ ಮೂರ್ನಾಲ್ಕು ವರ್ಷಗಳ ಕಾಲ ಕುಡಿಯುವ ನೀರನ್ನು ಬರವೇ ಇಲ್ಲದಂತಾಗುತ್ತಿತ್ತು. ಕಳೆದ ನಾಲ್ಕು ದಿನಗಳಿಂದ 20 ಎಚ್.ಪಿ ಸಾಮಥ್ರ್ಯದ 7 ಮೋಟಾರ್ ಬಳಸಿ ಈ ಕೆರೆಯ ನೀರನ್ನು ಹೊರಹಾಕಲಾಗುತ್ತಿದೆ. ಆದರೆ 22 ಎಕರೆ ವಿಸ್ತೀರ್ಣ ಹೊಂದಿರುವ ಈ ಕೆರೆಯ ನೀರನ್ನು ಸಂಪೂರ್ಣ ಹೊರ ಹಾಕಬೇಕಾದ್ರೆ ಕನಿಷ್ಠ 10 ದಿನಗಳಾದ್ರೂ ಬೇಕು. ಆದ್ರೆ ಅದೇ ಕೆರೆ ತುಂಬಲು ಒಂದು ಮಳೆಗಾಲ ಬೇಕೆಬೇಕು. ಇದೀಗ ಕೆರೆ ಬರಿದಾಗುತ್ತಿರುವುದರಿಂದ ಗ್ರಾಮದ ಜನರಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.
ಸದ್ಯ ಗ್ರಾಮಸ್ಥರು ಗ್ರಾಮದ ಇನ್ನೊಂದು ಚಿಕ್ಕ ಕೆರೆ ಮತ್ತು ಅಕ್ಕಪಕ್ಕದ ಗ್ರಾಮದ ಕೆರೆಗಳ ಮೊರೆಹೋಗಿದ್ದಾರೆ. ಮುಂಬರುವ ದಿನಗಳನ್ನು ಹೇಗೆ ನಿಭಾಯಿಸುವುದು ಎಂಬ ಚಿಂತೆ ಗ್ರಾಮದ ಜನರನ್ನು ಕಾಡುತ್ತಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews



