ವಿಜಯಪುರ: ಬೈಕಿಗೆ ಟೆಂಪೊ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲೇ ಬೈಕಿನಲ್ಲಿದ್ದ ತಾಯಿ ಹಾಗೂ ಮಗು ಸಾವನ್ನಪ್ಪಿರುವ ಘಟನೆ ವಿಜಯಪುರ ತಾಲೂಕಿನ ಜಂಬಗಿ ಕ್ರಾಸ್ ಬಳಿ ನಡೆದಿದೆ.
ವಿಜಯಪುರದ ಯೋಗಾಪುರ ನಿವಾಸಿ ಮಂಗಳಾ ರಜಪೂತ(28) ಹಾಗೂ ಮಗ ವಿಜಯ(3) ಮೃತ ದುರ್ದೈವಿಗಳು. ಮಂಗಳಾ ಪತಿ ಕಲ್ಯಾಣಸಿಂಗ್ ರಜಪೂತಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಮೂವರು ಒಂದೇ ಬೈಕಿನಲ್ಲಿ ಹೊನ್ನಳ್ಳಿಗೆ ಸಂಬಂಧಿಕರ ಮನೆಗೆ ಹೋಗಿ ತಮ್ಮೂರಿಗೆ ವಾಪಸ್ಸಾಗುತ್ತಿದ್ದರು. ಈ ವೇಳೆ ವೇಗವಾಗಿ ಬಂದ ಟೆಂಪೊ ಬೈಕಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ಮಂಗಳಾ ಮತ್ತು ವಿಜಯ್ ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಟೆಂಪೊ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣವಾಗಿದ್ದು, ಟೆಂಪೊ ಚಾಲಕನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಈ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.