ಉತ್ತರ-ದಕ್ಷಿಣ ಭೇದ ನಮಗಿಲ್ಲ, ನಮ್ಮದು ಒಂದೇ ಕರ್ನಾಟಕ: ಸಿದ್ದರಾಮಯ್ಯ

Public TV
1 Min Read
CM SIDDU

– ಸೌಹಾರ್ದತೆ ಪರಂಪರೆ ಗಟ್ಟಿಗೊಳಿಸಲೆಂದೇ ಬಾದಾಮಿಯಿಂದ ಸ್ಪರ್ಧೆ

ಬೆಂಗಳೂರು: ಉತ್ತರ-ದಕ್ಷಿಣವೆಂಬ ಬೇಧ ನಮಗಿಲ್ಲ. ನಮ್ಮದು ಒಂದೇ ಕರ್ನಾಟಕ ನೀತಿ. ಅದುವೇ ಅಖಂಡ ಕರ್ನಾಟಕ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಚಾರಿತ್ರಿಕ ಕಾರಣಗಳಿಂದಾಗಿ ರಾಜ್ಯದ ಕೆಲವು ಭಾಗಗಳು ಹಿಂದುಳಿದಿರುವುದು ನಿಜ. ಅವುಗಳ ಅಭಿವೃದ್ದಿಗೆ ಒತ್ತು ನೀಡುವ ಪ್ರಾದೇಶಿಕ ನ್ಯಾಯದ ಪರವಾಗಿ ನಮ್ಮ ಪಕ್ಷ ಇದೆ. ಜಾತಿ-ಧರ್ಮಗಳನ್ನು ರಾಜಕೀಯ ಲಾಭಕ್ಕಾಗಿ ಬಳಸುವುದು ಜನದ್ರೋಹದ ಕೆಲಸ. ಅಖಂಡ ಕರ್ನಾಟಕದ ರಕ್ಷಣೆ-ಅಭಿವೃದ್ದಿಗೆ ಕಾಂಗ್ರೆಸ್ ಬದ್ಧ, ನಾನು ಸದಾ ಸಿದ್ಧ. ಉತ್ತರ-ದಕ್ಷಿಣದ ನಡುವಿನ ಅಂತರವನ್ನು ಹೋಗಲಾಡಿಸಿ ಸೌಹಾರ್ದತೆಯ ಪರಂಪರೆಯನ್ನು ಗಟ್ಟಿಗೊಳಿಸಲಿಕ್ಕಾಗಿಯೇ ನಾನು ಬಾದಾಮಿ ಕ್ಷೇತ್ರದಿಂದ ಸ್ಪರ್ಧಿಸಿದ್ದೆ. ಆ ಕ್ಷೇತ್ರದ ಜನರ ಆಶೀರ್ವಾದ ನನ್ನ ಬದ್ಧತೆಯನ್ನು ಇನ್ನಷ್ಟು ಗಟ್ಟಿಗೊಳಿಸಿದೆ ಎಂದು ತಿಳಿಸಿದ್ದಾರೆ.

ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡಲು ಸಂವಿಧಾನಕ್ಕೆ ತಿದ್ದುಪಡಿ (371-ಜೆ) ಮಾಡಬೇಕೆಂಬ ಬೇಡಿಕೆ ಈಡೇರಿಸಿದ್ದು, ಕಾಂಗ್ರೆಸ್ ಪಕ್ಷ. ಆ ಬೇಡಿಕೆಯನ್ನು ತಿರಸ್ಕರಿಸಿದ್ದ ಬಿಜೆಪಿಯ ನಾಯಕರು ಈಗ ಪ್ರತ್ಯೇಕ ರಾಜ್ಯದ ಬೇಡಿಕೆ ಇಟ್ಟಿರುವುದು ಆತ್ಮದ್ರೋಹ ಮಾತ್ರವಲ್ಲ, ಆತ್ಮವಂಚಕ ನಡವಳಿಕೆ. ಡಿ.ಎಂ.ನಂಜುಂಡಪ್ಪ ಸಮಿತಿಯ ಶಿಫಾರಸ್ಸಿನಂತೆ ರೂಪಿಸಲಾಗಿದ್ದ ವಿಶೇಷ ಅಭಿವೃದ್ದಿ ಯೋಜನೆಯನ್ನು ಪರಿಣಾಮಕಾರಿಯಾಗಿ ಜಾರಿಮಾಡಲು ಅದರ ಅವಧಿಯನ್ನು 5 ವರ್ಷಗಳ ಕಾಲ ವಿಸ್ತರಿಸಿದ್ದು, ನಮ್ಮ ಸರ್ಕಾರ. ಪ್ರತಿ ವರ್ಷ ಇದಕ್ಕಾಗಿ 1500 ಕೋಟಿ ರೂ. ವಿಶೇಷ ಅನುದಾನವನ್ನು ನಮ್ಮ ಸರ್ಕಾರ ನೀಡಿತ್ತು ಅಂತ ಸಾಲು ಸಾಲು ಟ್ವೀಟ್ ಮಾಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಆಗಬೇಕು ಎಂಬುದರ ಕುರಿತಾಗಿ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಹಿರಿಯ ಮುಖಂಡರೂ ಆಗಿರುವ ಸಿದ್ದರಾಮಯ್ಯ ತಮ್ಮ ಅಭಿಪ್ರಾಯವನ್ನು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ.

Siddaramaiah Tweet

ಉತ್ತರ ಕರ್ನಾಟಕಕ್ಕೆ ರಾಜ್ಯ ಸರ್ಕಾರ ಮಲತಾಯಿ ಧೋರಣೆ ಅನುಸರಿಸುತ್ತಿದೆ ಎಂದು ಆರೋಪಿಸಿ ರೈತ ಸಂಘಟನೆ ಆಗಸ್ಟ್ 2 ರಂದು 13 ಜಿಲ್ಲೆಗಳ ಬಂದ್ ಗೆ ಕರೆ ನೀಡಿದೆ.

Share This Article
Leave a Comment

Leave a Reply

Your email address will not be published. Required fields are marked *