ಚಿಕ್ಕಬಳ್ಳಾಪುರದಿಂದ ವೀರಪ್ಪ ಮೊಯ್ಲಿ ಶಿಫ್ಟ್..?

Public TV
2 Min Read
veerappa m

ಚಿಕ್ಕಬಳ್ಳಾಪುರ: 2019ರ ಲೋಕಸಭಾ ಚುನಾವಣೆಯ ತಯಾರಿ ಎಲ್ಲ ಪಕ್ಷಗಳಲ್ಲಿ ಗರಿ ಗೆದರಿದ್ದು, ಕೆಲ ನಾಯಕರು ಕ್ಷೇತ್ರ ಹುಡುಕಾಟದಲ್ಲಿ ಇದ್ದರೆ, ಮತ್ತೆ ಕೆಲವರು ಕ್ಷೇತ್ರ ಬದಲಾವಣೆಗೆ ಮುಂದಾಗುತ್ತಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಸದ ಹಾಗು ಮಾಜಿ ಕೇಂದ್ರ ಸಚಿವರಾಗಿರುವ ವೀರಪ್ಪ ಮೊಯ್ಲಿ ಕ್ಷೇತ್ರ ಬದಲಾವಣೆಗೆ ಮುಂದಾಗುತ್ತಿದ್ದಾರೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಮೂಲಗಳು ತಿಳಿಸಿವೆ. ಇಷ್ಟು ದಿನ ವಿಧಾನಸಭಾ ಚುನಾವಣೆ, ಸಮ್ಮಿಶ್ರ ಸರ್ಕಾರ ರಚನೆ, ಸಂಪುಟ ರಚನೆಯ ವಿಷಯಗಳಲ್ಲಿ ಮಗ್ನರಾಗಿದ್ದ ನಾಯಕರು ಲೋಕಸಭ ಚುನಾವಣೆಯತ್ತ ಮುಖ ಮಾಡುತ್ತಿದ್ದಾರೆ. ಸೂಕ್ತ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ರೆ ಮಾತ್ರ ಗೆಲುವು ಸಾಧ್ಯ ಅಂತಾ ಅರಿತಿರೋ ರಾಜಕೀಯ ನಾಯಕರು ಲೆಕ್ಕಾಚಾರ ಅನುಗುಣವಾಗಿ ಕ್ಷೇತ್ರಗಳ ಆಯ್ಕೆ ಮಾಡಿಕೊಳ್ಳಲು ಮುಂದಾಗುತ್ತಿದ್ದಾರೆ.

2019ರ ಚುನಾವಣೆಗೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಇಚ್ಚೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎನ್ನಲಾಗುತ್ತಿದೆ. ಲೋಕಸಭಾ ಚುನಾವಣೆ ಕಾಂಗ್ರೆಸ್ ಪ್ರಾದೇಶಿಕ ಪಕ್ಷ ಜೆಡಿಎಸ್ ಜೊತೆ ಮೈತ್ರಿ ರಚಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಚಿಕ್ಕಬಳ್ಳಾಪುರ ಕ್ಷೇತ್ರ ಏನಾದ್ರೂ ಜೆಡಿಎಸ್ ಪಾಲಾಗುವ ಸಾಧ್ಯತೆಗಳಿವೆಯಂತೆ. ಮುನ್ಸೂಚನೆ ಗೊತ್ತಾಗಿ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದಲ್ಲಿ ಸರ್ವೇ ನಡೆಸುತ್ತಿದ್ದಾರೆ ಎಂದು ಹೇಳಲಾಗುತ್ತಿದೆ.

M Veerappa Moily

ಬಿಜೆಪಿ ಪ್ರಾಬಲ್ಯವುಳ್ಳ ಕ್ಷೇತ್ರ:
ವೀರಪ್ಪ ಮೊಯ್ಲಿ ಕಾಂಗ್ರೆಸ್‍ನಿಂದ ಟಿಕೆಟ್ ಪಡೆದು ಉಡುಪಿ-ಚಿಕ್ಕಮಗಳೂರು ಕ್ಷೇತ್ರದಿಂದ ಚುನಾವಣೆಗೆ ಸ್ಪರ್ಧೆ ಮಾಡಿದರೆ ಬಿಜೆಪಿ ನಾಯಕಿ ಶೋಭಾ ಕರಂದ್ಲಾಜೆ ಅವರನ್ನ ಎದುರಿಸಬೇಕು. ಉಡುಪಿ-ಚಿಕ್ಕಮಗಳೂರು ಕ್ಷೇತ್ರ ಬಿಜೆಪಿ ಪ್ರಾಬಲ್ಯವನ್ನು ಹೊಂದಿದೆ. ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಹೆಚ್ಚಿನ ಬಿಜೆಪಿ ನಾಯಕರೇ ಆಯ್ಕೆಯಾಗಿ ಬಂದಿದ್ದಾರೆ. ಶಾಸಕರಾದ ಸಿ.ಟಿ ರವಿ, ಸುರೇಶ್, ಕುಮಾರಸ್ವಾಮಿ, ಹಾಲಾಡಿ ಶ್ರೀನಿವಾಸ್ ಶೆಟ್ಟಿ, ಲಾಲಾಜಿ ಮೆಂಡನ್, ರಘುಪತಿ ಭಟ್, ಸುನಿಲ್ ಕುಮಾರ್ ಎಲ್ಲ ಪ್ರಬಲ ನಾಯಕರು ಉಡುಪಿ-ಚಿಕ್ಕಮಗಳೂರು ಲೋಕಸಭಾ ವ್ಯಾಪ್ತಿಯಲ್ಲಿ ಬರುತ್ತಾರೆ.

ರಾಜ್ಯ ರಾಜಕಾರಣಕ್ಕೆ ಮರಳುವ ಉದ್ದೇಶದಿಂದ ಶೋಬಾ ಕರಂದ್ಲಾಜೆ ಅವರು ಲೋಕಸಭಾ ಚುನಾವಣೆಗೆ ಸ್ಪರ್ಧಿಸಲು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ಸುದ್ದಿಯೊಂದು ಬಿಜೆಪಿ ಅಂಗಳದಲ್ಲಿ ಹರಿದಾಡುತ್ತಿದೆ. ಇತ್ತ ಉಡುಪಿ-ಚಿಕ್ಕ ಮಗಳೂರು ಕ್ಷೇತ್ರ ತೆರವಾದರೆ ಮಾಜಿ ಸಿಎಂ ಡಿ.ವಿ.ಸದಾನಂದಗೌಡ ಸ್ಪರ್ಧಿಸುವ ಇಚ್ಚೆಯನ್ನು ವ್ಯಕ್ತಪಡಿಸುತ್ತಿದ್ದಾರಂತೆ. ಇತ್ತ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿರುವ ಮಾಜಿ ಸಚಿವ ಜೀವರಾಜ್ ಉಡುಪಿ-ಚಿಕ್ಕ ಮಗಳೂರು ಕ್ಷೇತ್ರದ ಟಿಕೆಟ್ ಆಕಾಂಕ್ಷಿಗಳ ಪಟ್ಟಿಯಲ್ಲಿ ಮೊದಲನೇ ನಾಯಕರಾಗಿದ್ದಾರೆ. ಶೋಭಾ ಕರಂದ್ಲಾಜೆ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಇಬ್ಬರು ಜೀವರಾಜ್ ಅವರಿಗೆ ಬೆಂಬಲ ಸೂಚಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಕಾಂಗ್ರೆಸ್ ಸಾಮಾಜಿಕ ಜಾಲತಾಣಗಳ ಮುಖ್ಯಸ್ಥೆಯಾಗಿರುವ ರಮ್ಯಾ ಸಹ ಕ್ಷೇತ್ರ ಬದಲಾವಣೆಗೆ ಚಿಂತಿಸುತ್ತಿದ್ದು, ಮಂಡ್ಯದಿಂದ ಬೆಂಗಳೂರು ಉತ್ತರ ಕ್ಷೇತ್ರವನ್ನು ಆಯ್ಕೆ ಮಾಡಿಕೊಳ್ಳುವ ಸಾಧ್ಯತೆಗಳಿವೆ. ಒಂದು ವೇಳೆ ರಮ್ಯಾ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧಿಸಿದ್ರೆ, ಎದುರಾಳಿಯಾಗಿ ಬಿಜೆಪಿ ಶೋಭಾ ಕರಂದ್ಲಾಜೆ ಅವರನ್ನು ಚುನಾವಣಾ ಕಣಕ್ಕಿಳಿಸುವುದರ ಬಗ್ಗೆ ಚಿಂತನೆಯೂ ನಡೆಸುತ್ತಿದೆ. ತಮ್ಮ ಸ್ವಕ್ಷೇತ್ರ ಬಿಟ್ಟು ಬಂದ್ರೆ, ಖಾಲಿಯಾಗುವ ಕ್ಷೇತ್ರದ ಟಿಕೆಟ್‍ಗಾಗಿ ಡಿ.ವಿ.ಸದಾನಂದಗೌಡ ಮತ್ತು ಜೀವರಾಜ್ ನಡುವೆ ಪೈಪೋಟಿ ಏರ್ಪಟ್ಟಿದೆ ಎನ್ನಲಾಗುತ್ತಿದೆ.

Mng Shobha 2

ಲೋಕಸಭೆ ಅಧಿವೇಶನದ ಬಳಿಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ರಾಜ್ಯಕ್ಕೆ ಭೇಟಿ ನೀಡಲಿದ್ದಾರೆ. ಅಂದು ಲೋಕಸಭೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ನಿರ್ಧಾರ ಕೈಗೊಳ್ಳಲಾಗುತ್ತದೆ. ರಾಜ್ಯದ 28 ಕ್ಷೇತ್ರಗಳಿಂದ ಬಿಜೆಪಿ ಸ್ಪರ್ಧೆಗೆ ಇಳಿಯಲಿದೆ. ಆದರೆ ಶೋಭಾ ಕರಂದ್ಲಾಜೆ ಮತ್ತು ಡಿ.ವಿ.ಸದಾನಂದಗೌಡ ಅವರ ಮತಕ್ಷೇತ್ರಗಳ ಬದಲಾವಣೆ ಆಗುತ್ತದೆ ಎನ್ನುವುದು ಕೇವಲ ಊಹಾಪೋಹ ಅಷ್ಟೇ. ಆ ಬಗ್ಗೆ ಯಾವುದೇ ಚರ್ಚೆಯಾಗಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *