ವಿಷ ಕುಡಿದ ಯುವಪ್ರೇಮಿಗಳು – ಪ್ರೇಮಿ ಸಾವು, ಪ್ರಿಯತಮೆ ತೀವ್ರ ಅಸ್ವಸ್ಥ

Public TV
1 Min Read
CTD LOVRS

ಚಿತ್ರದುರ್ಗ: ಯುವ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಯತ್ನಿಸಿ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದು, ವಿಷ ಸೇವಿಸಿದ್ದ ಅಪ್ರಾಪ್ತ ಬಾಲಕಿ ಈಗ ತೀವ್ರ ಅಸ್ವಸ್ಥಳಾಗಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾಳೆ.

ಜಗದೀಶ್ ಮೃತ ಯುವಕ. ಚಿತ್ರದುರ್ಗ ತಾಲೂಕಿನ ಭರಮಸಾಗರ ಪೊಲೀಸ್ ಠಾಣೆ ವ್ಯಾಪ್ತಿಯ ಗ್ರಾಮದ ಜಗದೀಶ್ ಮತ್ತು ಅದೇ ಗ್ರಾಮದ ಸುಮಾರು 17 ವರ್ಷದ ಬಾಲಕಿ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಯುವಕ ಬೇರೆ ಜಾತಿ ಎಂಬ ಕಾರಣಕ್ಕೆ ಬಾಲಕಿಯ ಪೋಷಕರು ಇವರಿಬ್ಬರ ಪ್ರೀತಿಗೆ ವಿರೋಧ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಕಳೆದ 6ತಿಂಗಳ ಹಿಂದೆ ಮನೆಬಿಟ್ಟು ಹೋಗಿದ್ದ ಪ್ರೇಮಿಗಳು ಅಜ್ಞಾತ ಸ್ಥಳದಲ್ಲಿ ಮದುವೆಯಾಗಿದ್ದರು ಎಂದು ಹೇಳಲಾಗುತ್ತಿದೆ. ಈ ಮಧ್ಯೆ ಮಗಳು ಕಾಣೆಯಾಗಿರುವ ಬಗ್ಗೆ ಭರಮಸಾಗರ ಪೊಲೀಸ್ ಠಾಣೆಯಲ್ಲಿ ಬಾಲಕಿಯ ಪೋಷಕರು ಪ್ರಕರಣ ದಾಖಲಿಸಿದ್ದರು. ಬಳಿಕ ಪೊಲೀಸರು ಪ್ರೇಮಿಗಳನ್ನು ಪತ್ತೆ ಹಚ್ಚಿ ಕರೆದುಕೊಂಡು ಬಂದಿದ್ದರು. ಅಲ್ಲದೇ ರಾಜಿ ಪಂಚಾಯ್ತಿ ಮಾಡಿ ಬಾಲಕಿಯನ್ನ ಪೋಷಕರ ವಶಕ್ಕೆ ನೀಡಿದ್ದರು.

ಇದರಿಂದ ಮನನೊಂದ ಪ್ರೇಮಿಗಳು ಶನಿವಾರ ಚಿತ್ರದುರ್ಗ ತಾಲೂಕು ಅಳಗವಾಡಿ ಸಮೀಪದ ಬೆಟ್ಟಕ್ಕೆ ತೆರಳಿ ಅಲ್ಲಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಪರಿಣಾಮ ಯುವಕ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಇದನ್ನು ಅಲ್ಲಿದ್ದ ಸ್ಥಳೀಯರು ಗಮನಿಸಿ ಪೊಲೀಸರಿಗೆ ಮಾಹಿತಿ ರವಾನಿಸಿದ್ದಾರೆ. ಸದ್ಯಕ್ಕೆ ಬಾಲಕಿ ತೀವ್ರ ಅಸ್ವಸ್ಥಳಾಗಿದ್ದು, ದಾವಣಗೆರೆ ಚಿಗಟೇರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಳೆ.

ಪ್ರೇಮಿಗಳು ಆತ್ಮಹತ್ಯೆಗೆ ಯತ್ನಿಸಿರೋ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೇ ಭೇಟಿ ನೀಡಿದ ಪೊಲೀಸರು, ಪರಿಶೀಲನೆ ನಡೆಸಿದ್ದಾರೆ. ಯುವ ಜೋಡಿಗಳು ಆತ್ಮಹತ್ಯೆ ಮಾಡಿಕೊಳ್ಳಲು ತಂದಿದ್ದ, ವಿಷದ ಬಾಟಲ್, ಸಿಹಿ ತಿನಿಸುಗಳು, ತಂಪು ಪಾನಿಯ ಮತ್ತು ನೀರು ಸೇರಿದಂತೆ ನೇಣುಹಾಕಿಕೊಳ್ಳಲು ತಂದಿದ್ದ ಹಗ್ಗ ಕೂಡ ಸ್ಥಳದಲ್ಲಿ ಪತ್ತೆಯಾಗಿದೆ. ಈ ವಸ್ತುಗಳನ್ನೆಲ್ಲಾ ಗಮನಿಸಿದಾಗ, ಜಾತಿ ವಿಚಾರದಲ್ಲಿ ಪೋಷಕರ ವಿರೋಧ ಮತ್ತು ಸಮಾಜಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುವ ಕಠಿಣ ನಿರ್ಧಾರಕ್ಕೆ ಪ್ರೇಮಿಗಳು ಬಂದಿದ್ದರು ಎಂಬ ಬಗ್ಗೆ ಅನುಮಾನಗಳು ವ್ಯಕ್ತವಾಗಿದೆ.

ಇದು ಆತ್ಮಹತ್ಯೆಯಲ್ಲ ಕೊಲೆ ಎಂದು ಯುವಕನ ಪೋಷಕರು ಆರೋಪಿಸಿದ್ದಾರೆ. ಈ ಸಂಬಂಧ ಭರಮಸಾಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆಯನ್ನು ಮುಂದುವರೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *