ನವದೆಹಲಿ: ಎಚ್.ಡಿ.ಕುಮಾರಸ್ವಾಮಿ ಅವರಿಗೆ ಮುಖ್ಯಮಂತ್ರಿ ಸ್ಥಾನ ಸಿಗುತ್ತಿದ್ದಂತೆ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣರು ಸಹ ಸಮ್ಮಿಶ್ರ ಸರ್ಕಾರದಲ್ಲಿ ಪ್ರಭಾವಿ ನಾಯಕರಾಗಿದ್ದಾರೆ. ಕುಮಾರಸ್ವಾಮಿಯವರು ಎಲ್ಲಿಗೆ ಹೋದರು, ಬಂದರೂ ಅಲ್ಲಿ ರೇವಣ್ಣ ಜೊತೆಯಾಗುತ್ತಿದ್ದಾರೆ.
ಇಂದು ದೆಹಲಿ ಪ್ರವಾಸದಲ್ಲಿರುವ ಕುಮಾರಸ್ವಾಮಿ ಅವರ ಜೊತೆಗೆ ಸೂಪರ್ ಸಿಎಂ ರೇವಣ್ಣ ಅವರದ್ದೇ ಫುಲ್ ಹವಾ. ಸಿಎಂ ಕಾರ್ಯಕ್ರಮ, ಭೇಟಿ, ಸಭೆ ಎಲ್ಲದರಲ್ಲಿಯೂ ರೇವಣ್ಣ ಭಾಗವಹಿಸಿದ್ರು. ಮಂಗಳವಾರ ಸಾರಿಗೆ ಸಚಿವ ನಿತಿನ್ ಗಡ್ಕರಿ, ಇಂದು ಕೃಷಿ ಸಚಿವ ರಾಧಮೋಹನ್ ಸಿಂಗ್, ರೈಲ್ವೆ ಸಚಿವ ಪಿಯೂಷ್ ಗೊಯೇಲ್ ಅವರನ್ನು ಕುಮಾರಸ್ವಾಮಿ ಭೇಟಿ ಮಾಡಿದ್ದರು. ಐದು ಜನ ಸಚಿವರ ಪೈಕಿ ಮೂವರನ್ನು ಭೇಟಿ ಮಾಡುವ ವೇಳೆ ಸಿಎಂಗೆ ರೇವಣ್ಣ ಸಾಥ್ ನೀಡಿದ್ದರು.
ಕೃಷಿ ಸಚಿವರ ಭೇಟಿ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಕುಮಾರಸ್ವಾಮಿ, ರಾಜ್ಯದ ಕೃಷಿ ಯೋಜನೆಗಳಿಗೆ ಸಂಬಂಧಿಸಿದಂತೆ ಸಚಿವರಿಗೆ ಕೊಟ್ಟ ಮನವಿಗಳಿಗೆ ಸಕಾರಾತ್ಮಕ ಸ್ಪಂದನೆ ಸಿಕ್ಕಿದೆ. ಹಲವು ಜಿಲ್ಲೆಗಳಲ್ಲಿ ಮೆಗಾ ಡೈರಿ ಆರಂಭಕ್ಕೆ 900 ಕೋಟಿ ರೂ. ನೆರವು ನೀಡಲು ಕೇಂದ್ರ ಒಪ್ಪಿಗೆ ನೀಡಿದೆ. ದೆಹಲಿ ಭೇಟಿ ಫಲ ಕೊಟ್ಟಿದೆ ಎಂಬ ತೃಪ್ತಿಯಿದೆ ಎಂದರು.
ನವದೆಹಲಿಯ ಸೌತ್ ಬ್ಲಾಕ್ ನಲ್ಲಿರುವ ರಕ್ಷಣಾ ಕಚೇರಿಯಲ್ಲಿ ಸಚಿವೆ ನಿರ್ಮಲಾ ಸೀತರಾಮನ್ ಅವರನ್ನು ಕುಮಾರಸ್ವಾಮಿ ಭೇಟಿಯಾಗಿದ್ದು, ರಕ್ಷಣಾ ಇಲಾಖೆಗೆ ಸೇರಿದ ಬೆಂಗಳೂರಿನ ಭೂಮಿಯನ್ನು ಮೆಟ್ರೋ ಕಾಮಗಾರಿಗೆ ಬಳಕೆ ಮಾಡಿಕೊಳ್ಳಲು ಅನುಮತಿ ಕೇಳಿದ್ದಾರೆ.
ಐಫೋನ್ ಗಿಫ್ಟ್ ನೀಡಲು ಆರ್ಥಿಕ ಇಲಾಖೆಯಿಂದ ಹಣ ಬಿಡುಗಡೆ ಮಾಡಿಲ್ಲ. ನನ್ನ ಗಮನಕ್ಕೆ ಬಾರದೆ ಹಣ ಬಿಡುಗಡೆ ಆಗಲು ಸಾಧ್ಯವಿಲ್ಲ. ಅಷ್ಟೇ ಅಲ್ಲದೆ ಇದರಲ್ಲಿ ನನ್ನ ಪಾತ್ರವಿಲ್ಲ. ಐಫೋನ್ ಕೊಡುವ ಅವಶ್ಯಕತೆ ಇತ್ತೇ ಅಂತಾ ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್‍ಗೆ ಕೇಳಿದ್ದೆ. ಅವರು ಕಳೆದ ವರ್ಷವೂ ಕೊಟ್ಟಿದ್ದೆ, ಅದಕ್ಕೆ ಈ ಬಾರಿಯೂ ಕೊಟ್ಟಿದ್ದೇನೆ. ಆದರೆ ಕಳೆದ ಬಾರಿ ಗಿಫ್ಟ್ ನೀಡಿದಾಗ ಯಾವುದೇ ವಿರೋಧ ವ್ಯಕ್ತವಾಗಿರಲಿಲ್ಲ. ಹೀಗಾಗಿ ಕೊಟ್ಟಿರುವುದಾಗಿ ಅವರು ಹೇಳಿರುವರು ಎಂದು ಕುಮಾರಸ್ವಾಮಿ ತಿಳಿಸಿದರು.