ಕೊಡಗು ಹೊರತುಪಡಿಸಿ ರಾಜ್ಯದಲ್ಲಿ ಮಳೆ ಇಳಿಮುಖ- ಆಲಮಟ್ಟಿ ಜಲಾಶಯದಿಂದ ರಾತ್ರಿ ನೀರು ಬಿಡುಗಡೆ

Public TV
2 Min Read
RAIN DECLE

ಕೊಡಗು: ಜಿಲ್ಲೆಯಲ್ಲಿ ಮಳೆ ಇನ್ನೂ ಕೂಡಾ ಮುಂದುವರಿದಿದೆ. ಸೋಮವಾರ ಸಂಜೆ ಒಂದೆರಡು ಗಂಟೆ ಸ್ವಲ್ಪ ಬಿಡುವು ನೀಡಿದ್ದ ಮಳೆರಾಯ ಮತ್ತೇ ರಾತ್ರಿಯಿಂದಲೇ ಆರ್ಭಟಿಸುತ್ತಲೇ ಇದ್ದಾನೆ.

ಮಡಿಕೇರಿ, ವಿರಾಜಪೇಟೆ, ಸೋಮವಾರಪೇಟೆ ಸೇರಿದಂತೆ ಎಲ್ಲೆಡೆ ವ್ಯಾಪಕ ಮಳೆಯಾಗುತ್ತಿದೆ. ಸತತ ಮಳೆಯಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಸತತ ಮಳೆಯಿಂದ ನಾಟಿ ಮಾಡಿದ ಭತ್ತದ ಸಸಿ ಎಲ್ಲವೂ ನೀರಲ್ಲಿ ಕೊಚ್ಚಿಕೊಂಡು ಹೋಗಿರುವ ಘಟನೆ ಸೋಮವಾರಪೇಟೆ ತಾಲೂಕಿನ ಯಡೂರಿನಲ್ಲಿ ನಡೆದಿದೆ. ಹತ್ತಾರು ಎಕರೆಯಲ್ಲಿ ಮಳೆ ನೀರು ನಿಂತಿದ್ದರಿಂದ ರೈತರು ನೀರನ್ನ ಕಾಲುವೆಗೆ ಹಾರಿಸಲು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿತ್ತು.

RAIN 2 1

ಸಣ್ಣ ಪುಟ್ಟ ರಸ್ತೆಗಳು ಮುಳುಗಡೆಗೊಂಡಿದ್ದು, ಕೆಲ ಗ್ರಾಮಗಳು ಸಂಪರ್ಕ ಕಡಿದುಕೊಂಡಿದ್ದರೇ, ಕೆಲ ಗ್ರಾಮಗಳಲ್ಲಿ ಕಳೆದ ಕೆಲ ದಿನಗಳಿಂದ ವಿದ್ಯುತ್ ಸಂಪರ್ಕವೇ ಇಲ್ಲದಂತಾಗಿದೆ. ಕೆಲ ಕಡೆಗಳಲ್ಲಿ ಹಳ್ಳ ಕೊಳ್ಳಗಳು ಮೈದುಂಬಿ ಹರಿಯುತ್ತಿರುವುದರಿಂದ ರಸ್ತೆಗಳೆಲ್ಲಾ ಜಲಾವೃತಗೊಂಡಿದ್ದವು. ಭಾರೀ ಮಳೆಯಿಂದ ಕಳೆದ 10 ದಿನಗಳ ಹಿಂದೆಯೇ ಜಿಲ್ಲೆಯ ಹಾರಂಗಿ ಜಲಾಶಯ ಭರ್ತಿಯಾಗಿದ್ದು, 2,859 ಅಡಿ ಸಂಗ್ರಹ ಸಾಮರ್ಥ್ಯವಿರುವ ಜಲಾಶಯದಲ್ಲಿ ಸರಿ ಸುಮಾರು ಅಷ್ಟೇ ಪ್ರಮಾಣದ ನೀರು ಸಂಗ್ರಹವಾಗಿದೆ. ಹಾಗಾಗೀ ಜಲಾಶಯಕ್ಕೆ ಹರಿದು ಬರುತ್ತಿರುವ ಸುಮಾರು 15 ಸಾವಿರ ಕ್ಯೂಸೆಕ್ಸ್ ನೀರನ್ನ ಹಾಗೇಯೇ ಹರಿಬಿಡಲಾಗುತ್ತಿದೆ.

ಆಲಮಟ್ಟಿ ಜಲಾಶಯ ಒಳಹರಿವು ಹೆಚ್ಚಾದ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ 70 ಸಾವಿರ ಕ್ಯೂಸೆಕ್ ನೀರು ರಿಲೀಸ್ ಮಾಡಲಾಗಿದೆ. ಆಲಮಟ್ಟಿ ಜಲಾಶಯದಿಂದ ನಾರಾಯಣಪುರ ಜಲಾಶಯಕ್ಕೆ ನೀರು ಬಿಡುಗಡೆ ಮಾಡಲಾಗಿದ್ದು, ಈಗಾಗಲೇ ಸುರಕ್ಷತಾ ಸ್ಥಳಗಳಿಗೆ ತೆರಳಲು ನದಿ ತೀರದ ಗ್ರಾಮಸ್ಥರಿಗೆ ಬಾಗಲಕೋಟೆ ಜಿಲ್ಲಾಧಿಕಾರಿ ಕೆ.ಜಿ ಶಾಂತಾರಾಮ್ ಸೂಚನೆ ನೀಡಿದ್ದಾರೆ. ಆಲಮಟ್ಟಿ ಜಲಾಶಯದಿಂದ ನೀರು ಬಿಟ್ಟರೆ ಹುನಗುಂದ ತಾಲೂಕಿನ ನದಿ ತೀರದ ಗ್ರಾಮಗಳು ಜಲಾವೃತವಾಗುತ್ತವೆ.

RAIN 4

ಧಾರಾಕಾರ ಮಳೆಗೆ ಗುಜರಾತ್ ನಲುಗಿದೆ. ರಸ್ತೆಗಳೆಲ್ಲಾ ನದಿಯಂತಾಗಿದೆ. ರಸ್ತೆಯಲ್ಲಿ ಪ್ರವಾಹ ಹರಿಯುತ್ತಿದ್ದು, ಜನ ಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾವ್ ನಗರ್ ಎಂಬಲ್ಲಿ ರಸ್ತೆಯಲ್ಲಿ ಓರ್ವ ಬೈಕ್ ಸವಾರ ಬೈಕ್ ಸಮೇತ ಕೊಚ್ಚಿಹೋಗುತ್ತಿರುವ ದೃಶ್ಯ ಕುಂಭದ್ರೋಣ ಮಳೆಗೆ ಸಾಕ್ಷಿಯಂತಿದೆ. ಇತ್ತ ದೆಹಲಿಯಲ್ಲಿ ಇದೇ ಪರಿಸ್ಥಿತಿ. ವರುಣನ ಅಬ್ಬರಕ್ಕೆ ರಸ್ತೆಯಲ್ಲಿ ನೀರು ತುಂಬಿಕೊಂಡು ವಾಹನಗಳು ರಸ್ತೆಗಿಳಿಯದ ಪರಿಸ್ಥಿತಿ ನಿರ್ಮಾಣವಾಗಿದೆ. ಟ್ರಾಫಿಕ್ ಜಾಮ್‍ಗೆ ವಾಹನಗಳೆಲ್ಲಾ ರಸ್ತೆಗಳಲ್ಲೇ ಬಂಧಿಯಾಗಿದೆ. ಬಸ್ ಒಂದು ರಸ್ತೆಯಲ್ಲಿ ನೀರು ತುಂಬಿ ನಿಂತಿದೆ. ಇನ್ನು ಮತ್ತೊಂದೆಡೆ ಬಸ್ ಮೇಲೆಯೇ ಮರವೊಂದು ಬಿದ್ದಿದೆ.

Share This Article
Leave a Comment

Leave a Reply

Your email address will not be published. Required fields are marked *