ಚಾಮರಾಜನಗರ: ಕಬಿನಿ ಜಲಾಶಯದ ಹೊರ ಹರಿವು ಹೆಚ್ಚಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಕೊಳ್ಳೆಗಾಲ ತಾಲೂಕಿನಲ್ಲಿರುವ ಪುರಾತನ ಇತಿಹಾಸ ಪ್ರಸಿದ್ಧ ವೆಸ್ಲೀ ಸೇತುವೆ ಮುಳುಗಡೆಯ ಭೀತಿಯಲ್ಲಿದೆ.
ಸುಪ್ರಸಿದ್ಧ ವೆಸ್ಲೀ ಸೇತುವೆಯನ್ನು ಟಿಪ್ಪುಸುಲ್ತಾನನ ಕಾಲದಲ್ಲಿ ಕಪಿಲಾ ನದಿಗೆ ಅಡ್ಡಲಾಗಿ ನಿರ್ಮಾಣ ಮಾಡಲಾಗಿತ್ತು. ಬ್ರಿಟಿಷ್ ರಾಯಭಾರಿಯಾದ ವೆಸ್ಲೀಯ ನೆನಪಿಗಾಗಿ ಈ ಸೇತುವೆಗೆ ವೆಸ್ಲೀ ಸೇತುವೆ ಎಂದು ಟಿಪ್ಪು ಸುಲ್ತಾನ್ ಹೆಸರಿಟ್ಟಿದ್ದ. ಆದರೆ ಇಂದು ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಕಬಿನಿ ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿರುವುದರಿಂದ ಕಬಿನಿ ಜಲಾಶಯದಿಂದ ಅಪಾರ ಪ್ರಮಾಣದಲ್ಲಿ ನೀರನ್ನು ಹೊರಬಿಡಲಾಗಿತ್ತು.
ಕಪಿಲಾ ನದಿಯಲ್ಲಿ ನೀರಿನ ಹರಿವು ಜಾಸ್ತಿಯಾಗಿದ್ದರಿಂದ ವೆಸ್ಲೀ ಸೇತುವೆ ಮುಳುಗಡೆಗೆ ಕೇವಲ 2 ರಿಂದ 3 ಅಡಿಗಳಷ್ಟು ಮಾತ್ರ ಬಾಕಿಯಿದೆ. ಪುರಾತನ ಸೇತುವೆಗಳಲ್ಲೊಂದಾದ ವೆಸ್ಲೀ ಸೇತುವೆಯು ಅವನತಿಯ ಹಂಚಿನಲ್ಲಿದ್ದು, ಒಂದು ವೇಳೆ ಕೆಆರ್ ಎಸ್ ನಿಂದಲೂ ನೀರು ಬಿಡುಗಡೆಯಾದರೆ ಐತಿಹಾಸಿಕ ಸೇತುವೆ ಸಂಪೂರ್ಣವಾಗಿ ಮುಳಗಡೆಯಾಗಲಿದೆ.