ಸತತ 4 ವರ್ಷಗಳ ನಂತರ ಹೇಮಾವತಿ ಭರ್ತಿ

Public TV
1 Min Read
HSN RIVER

ಹಾಸನ: ಪಶ್ಚಿಮ ಘಟ್ಟಗಳ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯ ಪರಿಣಾಮ ಹಾಸನದ ಗೊರೂರು ಹೇಮಾವತಿ ಜಲಾಶಯ ಭರ್ತಿಯಾಗುವ ಹಂತ ತಲುಪಿದೆ.

ಜಿಲ್ಲೆಯಾದ್ಯಂತ ಮಳೆ ಆರ್ಭಟ ಜೋರಾಗಿದೆ. ಮಲೆನಾಡು ಭಾಗದ ಸಕಲೇಶಪುರ, ಆಲೂರು, ಬೇಲೂರು ಹಾಗೂ ಅರಕಲಗೂಡು ತಾಲೂಕುಗಳಲ್ಲಿ ಎಡೆಬಿಡದೆ ಮಳೆ ಸುರಿಯುತ್ತಿದೆ. ಇದರಿಂದಾಗಿ ಜನಜೀವನ ಕೂಡ ಅಸ್ತವ್ಯಸ್ತವಾಗಿದೆ. ಚಿಕ್ಕಮಗಳೂರು ಸೇರಿದಂತೆ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗುತ್ತಿರುವುದರಿಂದ ಜಿಲ್ಲೆಯ ಜೀವನದಿ ಹೇಮಾವತಿ ಒಳಹರಿವು 20 ಸಾವಿರ ಕ್ಯೂಸೆಕ್ ದಾಟಿದೆ. ಇದನ್ನೂ ಓದಿ: ಕೆಆರ್ ಎಸ್ ಭರ್ತಿಗೆ ಇನ್ನು 13 ಅಡಿ ಬಾಕಿ -5 ದಿನಗಳ ಕಾಲ ರಾಜ್ಯಾದ್ಯಂತ ಮಳೆ

HSN 1

ಜಲಾಶಯದ ನೀರಿನ ಮಟ್ಟ 2,913 ಅಡಿಗೇರಿದೆ. ಜಲಾಶಯದ ಗರಿಷ್ಠ ಮಟ್ಟ 2,922 ಅಡಿಗಳಾಗಿದ್ದು, ಡ್ಯಾಂ ಭರ್ತಿಗೆ ಕೇವಲ 9 ಅಡಿ ನೀರು ಬರಬೇಕಿದೆ. ಮಳೆ ಹೀಗೇ ಮುಂದುವರಿದರೆ ಒಂದೆರಡು ದಿನಗಳಲ್ಲಿ ಹೇಮಾವತಿ ಭರ್ತಿಯಾಗಲಿದ್ದಾಳೆ. ಈ ಹಿನ್ನೆಲೆಯಲ್ಲಿ ಯಾವುದೇ ಕ್ಷಣದಲ್ಲಾದರೂ, ಕ್ರಸ್ಟ್ ಗೇಟ್ ಗಳ ಮೂಲಕ ನದಿಗೆ ನೀರು ಬಿಡುವ ಸಾಧ್ಯತೆ ಇದ್ದು, ನದಿಪಾತ್ರದ ಜನರು ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಹೇಮಾವತಿ ಜಲಾಶಯದ ಅಧಿಕಾರಿಗಳು ಸೂಚಿಸಿದ್ದಾರೆ. ಅತಿ ಖುಷಿಯ ಸಂಗತಿ ಎಂದರೆ ಸತತ 4 ವರ್ಷಗಳ ನಂತರ ಜೀವನದಿ ಭರ್ತಿ ಹಂತ ತಲುಪಿರುವುದು ಹೇಮೆ ನಂಬಿರುವ ಲಕ್ಷಾಂತರ ಜನರಲ್ಲಿ ಹರ್ಷ ತರಿಸಿದೆ.

HSN 2

ಈ ಮೂಲಕ ನಿರಂತರ ಬರದ ಬೇಗೆ ನೀಗಲಿದೆ ಎಂಬ ಆಶಾಭಾವ ರೈತರದ್ದು, ಮತ್ತೊಂದೆಡೆ ಜನಜೀವನ ಅಸ್ತವ್ಯಸ್ತವಾಗಿದ್ದು, ಕೃಷಿ ಚಟುವಟಿಕೆಗೂ ಕೆಲವೆಡೆ ಹಿನ್ನಡೆಯಾಗಿದೆ. ಅರಕಲಗೂಡು, ಹಾಸನ ಮೊದಲಾದ ಕಡೆಗಳಲ್ಲಿ ತಂಬಾಕು, ಆಲೂಗೆಡ್ಡೆ ಮೊದಲಾದ ಬೆಳೆ ಅತಿವೃಷ್ಟಿಯಿಂದ ಹಾಳಾಗಿದೆ. ಸಕಲೇಶಪುರ ವಿವಿಧೆಡೆ ಗುಡ್ಡ ಕುಸಿತ ಉಂಟಾಗಿದೆ. ಹೆಚ್ಚು ಮಳೆಗೆ ವಿದ್ಯುತ್ ಕಂಬ ಮುರಿದು ಬಿದ್ದು, ಕಾಡಂಚಿನ ಗ್ರಾಮಗಳಲ್ಲಿ ಕರೆಂಟ್ ಕೈ ಕೊಟ್ಟಿದ್ದು, ಜನರು ಪರದಾಡುವಂತಾಗಿದೆ. ಬೆಳೆನಷ್ಟಕ್ಕೆ ಸೂಕ್ತ ಪರಿಹಾರ ನೀಡುವಂತೆ ರೈತರು ಮನವಿ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *