ವರುಣನ ರೌದ್ರಾವತಾರಕ್ಕೆ ತುಂಬಿದ ಕೆರೆ-ಕುಂಟೆ – ದಕ್ಷಿಣ ಕನ್ನಡ, ಉಡುಪಿ ಶಾಲಾ-ಕಾಲೇಜುಗಳಿಗೆ ರಜೆ

Public TV
2 Min Read
OVER RAIN

ಬೆಂಗಳೂರು: ದಿನೇ ದಿನೇ ವರುಣನ ಆರ್ಭಟ ಹೆಚ್ಚಾಗುತ್ತಿದ್ದು, ಕೆರೆ, ಕುಂಟೆ ಮತ್ತು ನದಿಗಳು ತುಂಬಿ ಹರಿಯುತ್ತಿದೆ. ಇದರಿಂದ ಜನರ ಜೀವನ ಅಸ್ತವ್ಯಸ್ತವಾಗಿದೆ.

ಕರಾವಳಿಯಲ್ಲಿ ಸ್ವಲ್ಪ ಬಿಡುವು ಕೊಟ್ಟ ವರುಣ ಈಗ ಉಡುಪಿ, ಮಡಿಕೇರಿ, ಚಿಕ್ಕಮಗಳೂರು ಭಾಗಗಳಲ್ಲಿ ಅಬ್ಬರಿಸುತ್ತಿದ್ದಾನೆ. ಎಲ್ಲಿ ನೋಡಿದರು ನೀರು ನಿಂತಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನು ನಾಲ್ಕು ದಿನ ಭಾರೀ ಮಳೆಯ ಮುನ್ಸೂಚನೆ ಇರುವುದರಿಂದ ಕೊಡಗು, ಉಡುಪಿ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಶಾಲಾ ಕಾಲೇಜುಗಳಿಗೆ ಇಂದು ಕೂಡ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ರಾತ್ರಿಯಿಂದ ಸುರಿದ ಧಾರಾಕಾರ ಮಳೆ- ಜನ ಜೀವನ ಅಸ್ತವ್ಯಸ್ತ, ಶಾಲಾ ಕಾಲೇಜುಗಳಿಗೆ ರಜೆ!

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ಎನ್‍ಡಿಆರ್ ತಂಡ ಆಯಕಟ್ಟಿನ ಜಾಗಗಳಲ್ಲಿ ನಿಯೋಜನೆಗೊಂಡಿದೆ. ಮೂಲ್ಕಿ ಭಾಗದಲ್ಲಿ ನೆರೆಗೆ ಕಾರಣವಾಗಿದ್ದ ಶಾಂಭವಿ ನದಿಯಲ್ಲಿ ನೀರು ಇಳಿಕೆಯಾಗಿದೆ. ಆದರು ಇಲ್ಲಿನ ಕೃಷಿ ಜಮೀನು, ತಗ್ಗು ಪ್ರದೇಶದ ಮನೆಗಳಿಗೆ ನುಗ್ಗಿದ್ದ ನೀರು ಕಡಿಮೆಯಾಗಿಲ್ಲ. ಹೀಗಾಗಿ ಶಿಬರೂರು, ಕಿಲೆಂಜೂರು ಭಾಗದ ಸಂತ್ರಸ್ತರಿಗಾಗಿ ಪ್ರಾಥಮಿಕ ಶಾಲೆಗಳಲ್ಲಿ ತಾತ್ಕಾಲಿಕ ಗಂಜಿ ಕೇಂದ್ರ ಆರಂಭಿಸಲಾಗಿದೆ.

RAIN 1

ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಹಳ್ಳಕೊಳ್ಳಗಳು, ಕೆರೆಗಳು ತುಂಬಿ ಹರಿಯುತ್ತಿದ್ದು, ನದಿಗಳಲ್ಲಿ ನೀರಿನ ಹರಿವು ಹೆಚ್ಚಾಗಿದೆ. ಕೆಆರ್‍ಎಸ್ ಭರ್ತಿಗೆ ಇನ್ನು 15.45 ಅಡಿ ಬಾಕಿ ಇದ್ದು, ಒಳಹರಿವು 10,124 ಕ್ಯೂಸೆಕ್ ಇದ್ದರೆ, ಹೊರ ಹರಿವು 3,494 ಕ್ಯೂಸೆಕ್ ಇದೆ. ಬರೋಬ್ಬರಿ 15 ವರ್ಷಗಳ ಬಳಿಕ ಒಂದೇ ತಿಂಗಳಲ್ಲಿ ತುಂಗಭದ್ರಾ ಡ್ಯಾಂನಲ್ಲಿ 42 ಟಿಎಂಸಿ ನೀರು ಸಂಗ್ರಹವಾಗಿದೆ. ಇನ್ನು ಹಾರಂಗಿ ಜಲಾಶಯ ಭರ್ತಿಯಾಗಿದ್ದು ಒಳ ಹರಿವು ಹೆಚ್ಚಳವಾಗಿದೆ.

ನಿರಂತರ ಮಳೆಯಿಂದಾಗಿ ಪಶ್ಚಿಮ ಘಟ್ಟದಿಂದ ಹರಿದು ಬರುವ ಬಹುತೇಕ ನದಿಗಳು ತುಂಬಿಕೊಂಡಿದೆ. ಗಡಿನಾಡು ಕಾಸರಗೋಡು ಜಿಲ್ಲೆಯ ಇತಿಹಾಸ ಪ್ರಸಿದ್ಧ ಮಧೂರು ಸಿದ್ಧಿವಿನಾಯಕ ಕ್ಷೇತ್ರಕ್ಕೆ ನದಿಯ ನೆರೆ ನೀರು ನುಗ್ಗಿದೆ. ದೇವಸ್ಥಾನದ ಅಂಗಣದ ಒಳಭಾಗದಲ್ಲಿ ಭಾನುವಾರ ರಾತ್ರಿಯಿಂದ ಎರಡು ಅಡಿಯಷ್ಟು ನೀರು ನಿಂತಿತ್ತು. ಬೆಳಗ್ಗೆ ಮತ್ತು ಮಧ್ಯಾಹ್ನದ ಪೂಜೆಗಳು ನೀರಿನ ಮಧ್ಯೆಯೇ ನಡೆದಿದೆ. ಭಕ್ತರು ನೀರಿನಲ್ಲಿ ನಿಂತೇ ದೇವರ ಸೇವೆ ಪೂರೈಸಿದ್ದಾರೆ. ದೇವಸ್ಥಾನದ ಮುಂಭಾಗದಲ್ಲಿ ಹರಿಯುವ ಮಧುವಾಹಿನಿ ಹೊಳೆಯಲ್ಲಿ ನೀರಿನ ಪ್ರಮಾಣ ಏರಿಕೆಯಾದಾಗ ಪ್ರತಿವರ್ಷವೂ ನೆರೆ ನೀರು ದೇಗುಲಕ್ಕೆ ನುಗ್ಗುತ್ತದೆ.

RAIN 2

ಉಡುಪಿ ಜಿಲ್ಲೆಯಲ್ಲಿ ಮೂರು ದಿನ ನಿರಂತರ ಮುಂಗಾರು ಮಳೆ ಆರ್ಭಟಿಸಿದ್ದು ಸ್ವರ್ಣಾ ನದಿ ಉಕ್ಕಿ ಹರಿದಿದೆ. ನದಿಯ ರಭಸಕ್ಕೆ ಬಜೆ ಅಣೆಕಟ್ಟು ಸಂಪೂರ್ಣ ಮುಳುಗಡೆಯಾಗಿದೆ. ಕಾರ್ಕಳ, ಉಡುಪಿಯಲ್ಲಿ ಸುರಿದ ಧಾಕಾರಾರ ಮಳೆ ಪರಿಣಾಮ ಅಣೆಕಟ್ಟು ಮೇಲಿಂದ ನದಿ ತುಂಬಿ ಹರಿಯುತ್ತಿದೆ. ಸುತ್ತ ಮುತ್ತಲಿನ ತೋಟಗಳಿಗೆ ನದಿ ನೀರು ನುಗ್ಗಿದೆ. ಪುನರ್ವಸು ಮಳೆಗೆ ಉಡುಪಿ ಜಿಲ್ಲೆ ತತ್ತರಗೊಂಡಿದ್ದು ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.

ಉಡುಪಿನಗರ, ಮಲ್ಪೆ, ಬ್ರಹ್ಮಾವರ ಮತ್ತು ಕೋಟ ಭಾಗಗಳಲ್ಲಿ ಹಲವು ಮನೆಗಳಿಗೆ ನೀರು ನುಗ್ಗಿವೆ. ಕುಂದಾಪುರದ ಖಾರ್ವಿಕೆರೆಯಲ್ಲಿ ಮೂರು ಮನೆಗಳು ಕುಸಿದಿವೆ. ಕೊಲ್ಲೂರಿನಲ್ಲಿ ಮಳೆಯಿಂದಾಗಿ ಜನಜೀವನ ಅಕ್ಷರಶಃ ಅಸ್ತವ್ಯಸ್ತಗೊಂಡಿತು. ಇನ್ನು ಕಾರ್ಕಳ ತಾಲೂಕಿನಲ್ಲೂ ಅತಿ ಹೆಚ್ಚು ಮಳೆಯಾಗಿದೆ. ಕಟಪಾಡಿಯ ಕಲ್ಲಾಪುವಿನಲ್ಲಿ ರಾಷ್ಡ್ರೀಯ ಹೆದ್ದಾರಿಯಲ್ಲಿ ನೆರೆ ನೀರು ಆವರಿಸಿದೆ. ನೆರೆಪೀಡಿತ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಭೇಟಿ ನೀಡಿದ್ದು, ತುರ್ತು ಕಾಮಗಾರಿಗೆ ಆದೇಶ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *