ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಪ್ಲಾಸ್ಟಿಕ್ ಬಳಕೆ ನಿಷೇಧವಿದ್ದರು ಸಹ ರಾಜ್ಯ ರಾಜಧಾನಿಯಲ್ಲಿ ಪ್ಲಾಸ್ಟಿಕ್ ಬಳಕೆಗೆ ಮಾತ್ರ ಕಡಿವಾಣ ಹಾಕಲು ಅಧಿಕಾರಿಗಳು ವಿಫಲರಾಗಿದ್ದಾರೆ. ಆದರೆ ಸದ್ಯ ಮತ್ತೊಮ್ಮೆ ಪ್ಲಾಸ್ಟಿಕ್ ಬಳಕೆ ಮಾಡುವವರ ವಿರುದ್ಧ ಸಮರ ಸಾರಿರುವ ಬಿಬಿಎಂಪಿ ಹೋಟೆಲ್, ಅಂಗಡಿ ಸೇರಿದಂತೆ ಇತರೆ ಕಡೆ ನಿಷೇಧಿತ ಪ್ಲಾಸ್ಟಿಕ್ ಬಳಕೆ ಮಾಡಿದರೆ ವ್ಯಾಪಾರಿ ಲೈಸೆನ್ಸ್ ರದ್ದು ಮಾಡುವ ಕುರಿತು ಚಿಂತನೆ ನಡೆಸಿದೆ.
ಬಿಬಿಎಂಪಿ ಕೌನ್ಸಿಲ್ ನಲ್ಲಿ ಇಂದು ನಡೆದ ಕಸ ನಿರ್ವಹಣೆ ಕುರಿತ ವಿಶೇಷ ಸಭೆಯಲ್ಲಿ ಈ ಕುರಿತು ಅಭಿಪ್ರಾಯ ವ್ಯಕ್ತವಾಗಿದೆ. ಪ್ಲಾಸ್ಟಿಕ್ ಬಳಕೆ ಬ್ಯಾನ್ ಆಗಿದ್ದರೂ ನಗರದಾದ್ಯಂತ ಅಂಗಡಿಗಳಲ್ಲಿ ಪ್ಲಾಸ್ಟಿಕ್ ಬಳಕೆ ಮಾಡಲಾಗುತ್ತಿದೆ ಎಂದು ಜಯನಗರ ಶಾಸಕಿ ಸೌಮ್ಯ ರೆಡ್ಡಿ ಸೇರಿದಂತೆ ಪಾಲಿಕೆ ಸದಸ್ಯರು ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಮೇಯರ್ ಸಂಪತ್ ರಾಜ್ಯ ನಗರದಾದ್ಯಂತ ಎಲ್ಲಾ ವ್ಯಾಪಾರಸ್ಥರಿಗೆ ಹತ್ತು ದಿನಗಳ ಕಾಲ ಗಡುವು ನೀಡಲಾಗುವುದು. ಅಷ್ಟರಲ್ಲಿ ಬೀದಿ ವ್ಯಾಪಾರ, ಹೋಟೆಲ್, ಅಂಗಡಿ, ಶೋರೂಂ ಎಲ್ಲಾ ಕಡೆ ಸಂಪೂರ್ಣವಾಗಿ ಪ್ಲಾಸ್ಟಿಕ್ ಬಳಕೆ ನಿಷೇಧಿಸದಿದ್ದರೆ ಆ ಅಂಗಡಿಯ ವ್ಯಾಪಾರ ಪರವಾನಗಿ ರದ್ದು ಮಾಡಲಾಗುವುದು ಎಂದು ಸೂಚಿಸಿದರು.
ಬಿಬಿಎಂಪಿ ವಿಶೇಷ ಕೌನ್ಸಿಲ್ ಸಭೆ ಆರಂಭವಾಗುತ್ತಿದಂತೆ, ಸಮರ್ಪಕವಾಗಿ ತ್ಯಾಜ್ಯ ನಿರ್ವಹಣೆ ಮಾಡಲು ಬಿಬಿಎಂಪಿ ವಿಫಲವಾಗಿದೆ ಎಂದು ಪ್ರತಿಪಕ್ಷ ನಾಯಕ ಪದ್ಮನಾಭರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಅಲ್ಲದೇ ಸ್ವಚ್ಛತೆಯಲ್ಲಿ ನಗರ ಕಡಿಮೆ ಶ್ರೇಯಾಂಕ ಪಡೆದಿದೆ ಎಂದು ಸಭೆಯ ಗಮನ ಸೆಳೆದರು. ಇದಕ್ಕೆ ತಿರುಗೇಟು ಕೊಟ್ಟ ಆಡಳಿತ ಪಕ್ಷದ ನಾಯಕ ಶಿವರಾಜ್, ಬೆಂಗಳೂರಿಗೆ ಕಡಿಮೆ ಶ್ರೇಯಾಂಕ ನೀಡಲಾಗಿದೆ. ಆದರೆ ವಿವಿಧ ಯೋಜನೆಗಳ ಮೂಲಕ ನಗರದ ಸ್ವಚ್ಛತೆ ಅಭಿವೃದ್ಧಿ ಪಡಿಸಲಾಗಿದೆ. ಆದರೂ ಕಡಿಮೆ ಶ್ರೇಯಾಂಕ ನೀಡಿದ್ದಾರೆ. ಇದಕ್ಕೆ ಇಲ್ಲಿನ ಬ್ಯಾನರ್, ಫೋಟೋ ಗಳಲ್ಲಿ ಪ್ರಧಾನಿ ಬದಲಿಗೆ ಸಿಎಂ ಫೋಟೋ ಹಾಕಿದ್ದೇ ಕಾರಣನಾ ಎಂದು ಪ್ರಶ್ನೆ ಮಾಡಿದರು. ಈ ಮಾತಿಗೆ ಬಿಜೆಪಿ ಸದಸ್ಯರು ಆಕ್ರೋಶ ವ್ಯಕ್ತಪಡಿಸಿ ಶ್ರೇಯಾಂಕ ನೀಡಲು ಸಮಿತಿ ಇದೇ. ಮೈಸೂರಿಗೂ ಶ್ರೇಯಾಂಕ ಕಡಿಮೆ ನೀಡಲಾಗಿದೆ. ಸ್ವಚ್ಛತೆಯ ಕುರಿತು ಜಾಗೃತಿ ಮೂಡಿಸಲು ನೀವು ಆಯ್ಕೆ ಮಾಡಿರುವ ಅಂಬಾಸಿಡರ್ ಎಷ್ಟು ಬಾರಿ ಸಭೆಗೆ ಆಗಮಿಸಿದ್ದಾರೆ ಎಂದು ಪ್ರಶ್ನಿಸಿದರು.
ಇನ್ನು ಬಿಬಿಎಂಪಿ ಪುನಃರಚನೆ ಸಂಬಂಧ ಜುಲೈ 13 ರಂದು ವಿಶೇಷ ಸಭೆ ಕರೆಯಲಾಗಿದ್ದು, ರಾಜ್ಯ ಸರ್ಕಾರಕ್ಕೆ ನೀಡಿರುವ ಬಿಎಸ್ ಪಾಟೀಲ್ ವರದಿ ಆಧರಿಸಿ ಚರ್ಚೆ ನಡೆಸಲು ತೀರ್ಮಾನಿಸಲಾಗಿದೆ.