ಆಗಸ್ಟ್ 15ಕ್ಕೆ ಜಿಯೋ ಗಿಗಾ ಫೈಬರ್ ಸೇವೆ ಆರಂಭ- ಡೇಟಾ ವಾರ್ ಬಳಿಕ ಬ್ರಾಡ್‍ಬ್ಯಾಂಡ್ ವಾರ್?

Public TV
2 Min Read
JIO AMBANI

ಮುಂಬೈ: ಜಿಯೊ ಸಿಮ್ ಗಳ ಮೂಲಕ ಉಚಿತ ಕರೆ ಮತ್ತು ಅಗ್ಗದ ದರದಲ್ಲಿ ಡೇಟಾ ಪೂರೈಸುತ್ತಿರುವ ರಿಲಯನ್ಸ್ ಜಿಯೋ ಗುರುವಾರ ಸ್ಥಿರ ಬ್ರಾಂಡ್‍ಬ್ಯಾಂಡ್ ಇಂಟರ್ನೆಟ್ ಸೇವೆ ಪ್ರಾರಂಭಿಸುವುದಾಗಿ ಘೋಷಿಸಿದೆ.

ಉಚಿತ ಕರೆ, ಉಚಿತ ಡೇಟಾ ನೀಡಿ ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಬಿರುಗಾಳಿ ಎಬ್ಬಿಸಿದ್ದ ಜಿಯೋ ಗಿಗಾ ಫೈಬರ್ ಮೂಲಕ ಸ್ಥಿರ ಬ್ರಾಡ್‍ಬ್ಯಾಂಡ್ ಇಂಟರ್ನೆಟ್ ಸೇವಾಕ್ಷೇತ್ರಕ್ಕೂ ಕಾಲಿಡುವ ಮೂಲಕ ಮತ್ತೊಮ್ಮೆ ತನ್ನ ಆರ್ಭಟ ಮುಂದುವರಿಸಲು ತಯಾರಾಗಿದೆ.

ಮಾಧ್ಯಮಗಳ ಜೊತೆ ಮಾತನಾಡಿದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿಯವರು, ಆಗಸ್ಟ್ 15 ರಂದು `ಜಿಯೋ ಗಿಗಾ ಫೈಬರ್’ ಸೇವೆ ಬಿಡುಗಡೆಗೊಳಿಸುವುದಾಗಿ ಘೋಷಿಸಿದ್ದಾರೆ. ಯೋಜಿತ ಫೈಬರ್ ಬ್ರಾಂಡ್‍ಬ್ಯಾಂಡ್ ವ್ಯವಸ್ಥೆ ಅತ್ಯಾಧುನಿಕವಾಗಿರಲಿದೆ ಎಂದು ಈ ವೇಳೆ ಹೇಳಿದ್ದಾರೆ.

ದೇಶದ 1,100 ನಗರಗಳಿಗೆ ಫೈಬರ್ ಬ್ರಾಡ್‍ಬ್ಯಾಂಡ್ ಸೇವೆ ಪೂರೈಕೆ ಮಾಡಲಿದ್ದೇವೆ. ಇದು ವ್ಯಾಪಾರಿಗಳಿಗೆ, ಸಣ್ಣ ಮತ್ತು ಮಧ್ಯಮ ಉದ್ಯಮಗಳಲ್ಲಿ ಹಾಗೂ ಬೃಹತ್ ಉದ್ಯಮಗಳಿಗೆ ಬ್ರಾಡ್‍ಬ್ಯಾಂಡ್ ಸೇವೆ ವಿಸ್ತರಿಸುವುದಾಗಿ ಹೂಡಿಕೆದಾರರಿಗೆ ತಿಳಿಸಿದ್ದಾರೆ.

ಜಿಯೋ ಫೈಬರ್ ಬ್ರಾಡ್‍ಬ್ಯಾಂಡ್ ಟಿವಿ ಸೆಟ್ ಟಾಪ್ ಬಾಕ್ಸ್ ಜೊತೆ ಬರಲಿದ್ದು, ಧ್ವನಿ ಮೂಲಕ ಸೂಚನೆ ನೀಡಬಹುದಾಗಿದೆ. ವಿವಿಧ ಪ್ರಾದೇಶಿಕ ಭಾಷೆಗಳಲ್ಲೂ ಧ್ವನಿ ಸೂಚನೆ ಲಭ್ಯವಿರಲಿದೆ.

ಈಗಾಗಲೇ ಜಿಯೋ ತನ್ನ 22 ತಿಂಗಳುಗಳ ಅವಧಿಯಲ್ಲಿ ಭಾರತದ ಸುಮಾರು 21.5 ಕೋಟಿ ಗ್ರಾಹಕರನ್ನು ಸಂಪಾದಿಸಿದೆ. ಈ ಮೂಲಕ ಬ್ರಾಂಡ್‍ಬ್ಯಾಂಡ್ ಕ್ಷೇತ್ರದಲ್ಲಿ ಸದ್ದು ಮಾಡಲು ಸಜ್ಜಾಗಿದ್ದು, ಪ್ರಸ್ತುತ ಮನೆಗಳಿಗೆ ಭಾರತಿ ಏರ್‍ಟೆಲ್, ಟಾಟಾ ಡೊಕೊಮೊ ಹಾಗೂ ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಬ್ರಾಡ್‍ಬ್ಯಾಂಡ್ ಸೇವೆ ಒದಗಿಸುತ್ತಿರುವ ಕಂಪೆನಿಗಳಗೆ ಭಾರೀ ಪೈಪೋಟಿ ನೀಡಲು ಸಿದ್ಧವಾಗಿದೆ.

ಈ ಮೊದಲು 2016ರ ಸೆಪ್ಟೆಂಬರ್ ನಲ್ಲಿ ನಡೆದ ರಿಲಯನ್ಸ್ ವಾರ್ಷಿಕ ಸಭೆಯಲ್ಲಿ ಮುಕೇಶ್ ಅಂಬಾನಿ ಮಲ್ಟಿ ಗಿಗಾಬೈಟ್ ಸೇವೆಯನ್ನು ದೇಶದ 100 ನಗರಗಳಲ್ಲಿ ಆರಂಭಿಸಲಾಗುವುದು. ಅಲ್ಲದೇ ಕೆಲ ನಗರಗಳಲ್ಲಿ ಪರೀಕ್ಷಾರ್ಥ ಪ್ರಯೋಗಗಳನ್ನು ನಡೆಸುತ್ತಿದೆ ಎಂದು ತಿಳಿಸಿದ್ದರು. ಅಲ್ಲದೇ ಫೈಬರ್ ಸೇವೆಯನ್ನು ಯಾವಾಗ ಆರಂಭವಾಗಲಿದೆ ಎನ್ನುವುದನ್ನು ಅಧಿಕೃತವಾಗಿ ಪ್ರಕಟಿಸಿರಲಿಲ್ಲ.

ಇದೇ ಸಂದರ್ಭದಲ್ಲಿ ಜಿಯೊ ಸ್ಮಾರ್ಟ್‍ಫೋನ್ ಸಾಧನಗಳನ್ನೂ ಪ್ರಕಟಿಸಲಾಗಿದೆ. ಆಡಿಯೋ ಮತ್ತು ವಿಡಿಯೋ ಡಾಂಗಲ್, ಸ್ಮಾಟ್ ಸ್ಪೀಕರ್, ವೈ-ಫೈ ಎಕ್ಸ್ ಟೆಂಡರ್, ಸ್ಮಾರ್ಟ್ ಪ್ಲಗ್, ಟಿವಿ ಕ್ಯಾಮೆರಾಗಳನ್ನು ಬಿಡುಗಡೆಗೊಳಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *