ಬೆಂಗಳೂರು: ರೆಬೆಲ್ ಸ್ಟಾರ್ ಅಂಬರೀಶ್ ಅವರನ್ನು ಸಂಭಾಳಿಸೋದು ಕಷ್ಟ ಎಂಬುದು ಚಿತ್ರರಂಗದಲ್ಲಿ ಜನಜನಿತವಾಗಿರುವ ಅಭಿಪ್ರಾಯ. ಈ ಹಿರಿಯ ನಟನನ್ನು ಸಂಭಾಳಿಸಲು ಚಿಕ್ಕ ವಯಸ್ಸಿನ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದ ನಿರ್ದೇಶಕ ಗುರುದತ್ ಏನು ಮಾಡಿರಬಹುದು ಎಂಬ ಕ್ಯೂರಿಯಾಸಿಟಿ ಅನೇಕರಲ್ಲಿದ್ದದ್ದು ಸುಳ್ಳಲ್ಲ!
ಈ ಬಗ್ಗೆ ಇದೀಗ ಸ್ವತಃ ನಿರ್ದೇಶಕ ಗುರುದತ್ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅಂಬರೀಶ್ ಅವರ ಜೊತೆ ಚಿತ್ರ ಮಾಡೋವಾಗ ಗುರುದತ್ ಆರಂಭದಲ್ಲಿ ಇದು ಕನಸೇನೋ ಅಂದುಕೊಂಡಿದ್ದರಂತೆ. ಅವರ ನಟನೆಯನ್ನು ನಿರ್ದೇಶನ ಮಾಡೋ ಸವಾಲನ್ನು ಎದುರುಗೊಳ್ಳಲು ತಮ್ಮಿಂದ ಸಾಧ್ಯವಾಗುತ್ತಾ ಅಂತಲೂ ಭಯಗೊಂಡಿದ್ದರಂತೆ. ಅವರ ಸಿಟ್ಟು ಸೆಡವುಗಳ ಕಥೆಗಳನ್ನೂ ಕೇಳಿರುವುದರಿಂದ ಆ ಬಗೆಗೂ ಗುರುದತ್ ಭಯ ಹೊಂದಿದ್ದರಂತೆ.
ಆದರೆ ಅಂಬಿ ನಿಂಗೆ ವಯಸ್ಸಾಯ್ತೋ ಚಿತ್ರದುದ್ದಕ್ಕೂ ಗುರುದತ್‍ಗೆ ಸಿಕ್ಕಿದ್ದು ಅಪ್ಪನಂಥಾ ಅಂಬರೀಶ್ ಯಾಕೆಂದರೆ ಅವರು ಒಂದು ಹಂತದಲ್ಲಿಯೂ ಸಿಟ್ಟು ಮಾಡಿಕೊಂಡಿಲ್ಲವಂತೆ. ಆದಷ್ಟು ಸಮಯವನ್ನೂ ಕೂಡಾ ಮೇಂಟೇನ್ ಮಾಡಿದ್ದಾರಂತೆ. ಇದೆಲ್ಲದರಿಂದ ಥ್ರಿಲ್ ಆಗಿರೋ ಗುರುದತ್ ಅಂಬಿ ಜೊತೆ ಕೆಲಸ ಮಾಡೋದೆಂದರೆ ಅಪ್ಪನ ಜೊತೆ ಕೆಲಸ ಮಾಡಿದಷ್ಟೇ ಕಂಫರ್ಟ್ ಫೀಲ್ ಕೊಟ್ಟಿದೆ ಅಂತ ಹೇಳಿಕೊಂಡಿದ್ದಾರೆ.