ಹಾಸನ: ವಾಟ್ಸಾಪ್ ಗೆ ತನ್ನ ಫೋಟೋ ಕಳಿಸುವಂತೆ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ ಕಾಲೇಜಿನ ಕಾರ್ಯದರ್ಶಿಯನ್ನು ಬಂಧಿಸುವಂತೆ ಒತ್ತಾಯಿಸಿದ್ದಲ್ಲದೆ ಶಾಲೆಯ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡ ಘಟನೆ ಬೇಲೂರು ಪಟ್ಟಣದಲ್ಲಿ ನಡೆದಿದೆ.
ಪಟ್ಟಣದ ವಿಶ್ವ ಸಂಯುಕ್ತ ಪದವಿ ಪೂರ್ವ ಕಾಲೇಜಿನ ಕಾರ್ಯದರ್ಶಿ ಯಶಸ್ವಿ ಅದೇ ಕಾಲೇಜಿನಲ್ಲಿ ಹತ್ತನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿಗೆ ಪ್ರತಿ ನಿತ್ಯ ಫೋಟೋ ಕಳಿಸುವಂತೆ ಕಿರುಕುಳ ನೀಡುತ್ತಿದ್ದಾನೆ. ಇದರಿಂದ ಬೇಸತ್ತ ವಿದ್ಯಾರ್ಥಿನಿ ತನ್ನ ಪೋಷಕರಿಗೆ ವಿಷಯ ತಿಳಿಸಿದ್ದು, ಕಾಲೇಜಿಗೆ ಆಗಮಿಸಿದ ಪೋಷಕರು ಕಾಲೇಜಿನ ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ.
ಎಲ್ಲರ ಎದುರು ಯಶಸ್ವಿ ತನ್ನ ತಪ್ಪನ್ನು ಒಪ್ಪಿಕೊಂಡು ವಿದ್ಯಾರ್ಥಿನಿ ಬಳಿ ಕ್ಷಮೆಯಾಚಿಸಿದ್ದಾನೆ. ಆದರೆ ಮರು ದಿನ ವಿದ್ಯಾರ್ಥಿನಿ ಶಾಲೆಗೆ ಬರುತ್ತಿದ್ದ ವೇಳೆ ರಸ್ತೆ ಮಧ್ಯೆ ಅಡ್ಡಗಟ್ಟಿ ನಿನ್ನನ್ನು ಸುಮ್ಮನೆ ಬಿಡುವುದಿಲ್ಲ ಎಂದು ಧಮ್ಕಿ ಹಾಕಿದ್ದು, ಹೆದರಿದ ಬಾಲಕಿ ಮತ್ತೆ ತನ್ನ ಪೋಷಕರಿಗೆ ತಿಳಿಸಿದ್ದಾಳೆ.
ಕಾಲೇಜಿಗೆ ಆಗಮಿಸಿದ ಪೋಷಕರು ಕಾಲೇಜಿನ ಪ್ರಾಂಶುಪಾಲ ಹಾಗೂ ಆಡಳಿತ ಮಂಡಳಿ ಅವರನ್ನು ತರಾಟೆಗೆ ತೆಗೆದುಕೊಂಡು ಕೂಡಲೇ ಯಶಸ್ವಿಯನ್ನು ಬಂಧಿಸಿ ಶಿಸ್ತು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ.
ಸದ್ಯ ಪೊಲೀಸರು ಸ್ಥಳಕ್ಕೆ ಬಂದು ಪರಿಸ್ಥಿತಿ ನಿಯಂತ್ರಿಸಿದ್ದಾರೆ. ಯಶಸ್ವಿ ಕಾಲೇಜಿನ ಮಾಲೀಕ ಹಾಗೂ ವೈಡಿಡಿ ಕಾಲೇಜಿನ ಪ್ರಾಂಶುಪಾಲ ಜಯಣ್ಣಗೌಡ ಪುತ್ರ. ಸದ್ಯ ಬೇಲೂರು ಪೊಲೀಸರು ವಿಚಾರಣೆ ನಡೆಸಿದ್ದಾರೆ.