ದಾವಣಗೆರೆ: ಟಗರು ಕಾಳಗದಲ್ಲಿ ಹೆಜ್ಜೆ ಹಿಂದಕ್ಕೆ ಇಟ್ಟಿದೆ ಎಂದರೆ ಅದು ಹೆದರಿ ಅಂತಾ ಅಲ್ಲ. ಮುಂದೆ ಹೆಜ್ಜೆ ಇಡಲು ಸಿದ್ಧವಾಗುತ್ತಿದೆ ಎಂದು ಸಿನಿಮೀಯ ಸ್ಟೈಲ್ ನಲ್ಲಿ ಹರಿಹರ ತಾಲ್ಲೂಕಿನ ಕಾಗಿನೆಲೆ ಮಠದ ನಿರಂಜನಾನಂದ ಪುರಿ ಸ್ವಾಮೀಜಿ ಹೇಳಿದ್ದಾರೆ.
ಬೆಳ್ಳೂಡಿಯ ಕಾಗಿನೆಲೆ ಕನಕ ಗುರು ಪೀಠದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸ್ವಾಮೀಜಿ, ಮಾಜಿ ಸಿಎಂ ಸಿದ್ದರಾಮಯ್ಯ ಅವರು ಮೌನವಾಗಿರುವುದನ್ನು ಶ್ರೀಗಳು, ಟಗರು ಕಾಳಗಕ್ಕೆ ಹೋಲಿಸಿದ್ದು, ಟಗರು ಕಾಲು ಕೆದರಿ ಮುನ್ನುಗ್ಗಿ ಹೊಡೆದರೆ ಎಲ್ಲಾ ಛಿದ್ರ ಛಿದ್ರವಾಗುತ್ತದೆ ಎಂದು ಸಿದ್ದರಾಮಯ್ಯ ಪರ ಬ್ಯಾಟ್ ಬೀಸಿದರು.
ಸಮ್ಮಿಶ್ರ ಸರ್ಕಾರ ಮಾಜಿ ಸಿಎಂ ಸಿದ್ದರಾಮಯ್ಯ ಅವರನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕಾಂಗ್ರೆಸ್ ಪಕ್ಷಕ್ಕೆ ನಷ್ಟವಾಗುತ್ತದೆ. ಅಲ್ಲದೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 15 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವುದು ಕಷ್ಟವಾಗುತ್ತದೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಗೆ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಅವರಿಗೆ ಶ್ರೀಗಳು ಎಚ್ಚರಿಕೆ ನೀಡಿದರು.
ಸಾಕಷ್ಟು ಅಧಿಕಾರಿಗಳು ನನ್ನ ಬಳಿ ಬಂದು ವರ್ಗಾವಣೆ ಮಾಡುತ್ತಿರುವ ಕುರಿತು ಅಳಲು ತೊಡಿಕೊಂಡಿದ್ದಾರೆ. ಆದರೆ ಅಧಿಕಾರಿಗಳ ಹೆಸರನ್ನು ಬಹಿರಂಗ ಪಡಿಸುವುದಿಲ್ಲ. ಅರಣ್ಯ, ಪರಿಸರ ಮತ್ತು ಜೀವಿಶಾಸ್ತ್ರ ಸಚಿವ ಆರ್.ಶಂಕರ್ ಅವರಿಗೆ ಮಂತ್ರಿಗಿರಿ ನೀಡಿದ್ದು, ಪಕ್ಷೇತರ ಎಂಬ ಉದ್ದೇಶಕ್ಕೆ ಹೊರತು ಕುರುಬರ ಸಮಾಜದವರು ಅಂತಾ ಅಲ್ಲ. ನಮ್ಮ ಸಮಾಜಕ್ಕೆ ಎರಡು ಸಚಿವ ಸ್ಥಾನ ಕೊಡಬೇಕಾಗಿತ್ತು. ಸಮ್ಮಿಶ್ರ ಸರ್ಕಾರದಲ್ಲಿ ಗೌಡರು, ಲಿಂಗಾಯತರ ಪ್ರಾಬಲ್ಯ ಹೆಚ್ಚಾಗಿದೆ. ಕುರುಬ ಸಮುದಾಯಕ್ಕೆ ಉತ್ತಮ ಸ್ಥಾನ ಮಾನ ಒದಗಿಸಿಕೊಡಬೇಕು ಇಲ್ಲದಿದ್ದರೇ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಅವರಿಗೆ ಶ್ರೀಗಳು ಎಚ್ಚರಿಕೆ ನೀಡಿದರು.