ಮದ್ವೆಗೆ ವಿಶೇಷ ವರದಕ್ಷಿಣೆ ಬೇಡಿಕೆಯಿಟ್ಟ ವರ- ಬಂದ ಅತಿಥಿಗಳಿಗೆ ಸಿಕ್ತು ಭರ್ಜರಿ ಉಡುಗೊರೆ!

Public TV
1 Min Read
DOWRY DEMAND COLLAGE

ಭುವನೇಶ್ವರ್: ವರನೊಬ್ಬ ತನ್ನ ಮದುವೆಗೆ 1,000 ಸಸಿಗಳನ್ನು ವರದಕ್ಷಿಣೆಯಾಗಿ ಪಡೆದ ಘಟನೆ ಒಡಿಶಾದ ಕೇಂದ್ರಪಾಡಾ ಜಿಲ್ಲೆಯ ಬಲ್‍ಬದ್ರಪುರ ಗ್ರಾಮದಲ್ಲಿ ನಡೆದಿದೆ.

ಸರೋಜ್ ಪೇಶೆ, ಸಸಿಗಳನ್ನು ವರದಕ್ಷಿಣೆ ಆಗಿ ಪಡೆದ ವರ. ವೃತ್ತಿಯಲ್ಲಿ ಶಿಕ್ಷಕನಾಗಿರುವ ಸರೋಜ್ ಅವರಿಗೆ ತಮ್ಮ ಮದುವೆಯಲ್ಲಿ ಪಟಾಕಿ ಸಿಡಿಸುವುದು ಹಾಗೂ ಮಂಟಪವನ್ನು ಹೂವಿನಿಂದ ಅಲಂಕಾರ ಮಾಡುವುದು ಇಷ್ಟವಿಲ್ಲ. ಬದಲಾಗಿ ಸಿಂಪಲ್ ಆಗಿ ಮದುವೆ ಆಗೋ ಇಚ್ಚೆಯಿತ್ತು.

ತನ್ನ ಮದುವೆ ಮಾತುಕತೆ ನಡೆಯುತ್ತಿದ್ದಾಗ ಸರೋಜ್ ಒಂದು ಷರತ್ತು ಹಾಕಿದ್ದರು. ವಧು ಕಡೆಯವರು 1,000 ಸಸಿಗಳನ್ನು ವರದಕ್ಷಿಣೆ ಆಗಿ ನೀಡಬೇಕೆಂದು ಸರೋಜ್ ಬೇಡಿಕೆ ಇಟ್ಟಿದ್ದರು. ಸರೋಜ್ ಬಿಸ್ವಾಲ್ ‘ಗಾಚಾ ಟಾಯಿ ಸಾಥಿ ಟಾಯಿ (ಮರ ಒಂದು ಸಂಗಾತಿ)’ ಸಂಸ್ಥೆಯ ಸದಸ್ಯರಾಗಿದ್ದಾರೆ. ಈ ಸಂಸ್ಥೆ ಸಸಿ ನೆಡುವ ಜಾಗೃತಿ ಮೂಡಿಸುತ್ತದೆ. ಇದಕ್ಕೆ ವಧು ರಶ್ಮಿರೇಖಾ ಕೂಡ ಸಾಥ್ ನೀಡಿದ್ದರು. ವಿಶೇಷವೆಂದರೆ ರಶ್ಮಿರೇಖಾ ಕೂಡ ವೃತ್ತಿಯಲ್ಲಿ ಶಿಕ್ಷಕರಾಗಿದ್ದಾರೆ.

dowry demand

ಜೂನ್ 22ರಂದು ಸರೋಜ್ ಹಾಗೂ ರಶ್ಮಿರೇಖಾ ಅವರ ಮದುವೆ ನಡೆಯಿತು. ಮದುವೆ ನಡೆಯುತ್ತಿದ್ದ ಸ್ಥಳದಲ್ಲೇ ವಧುವಿನ ಮನೆಯವರು ಒಂದು ಟ್ರಕ್‍ನಲ್ಲಿ ಸಸಿ ತರಿಸಿದ್ದರು. ಆ ಸಸಿಗಳಲ್ಲಿ ಹೆಚ್ಚು ಹಣ್ಣಿನ ಸಸಿಗಳು ಇದ್ದಿದು ವಿಶೇಷವಾಗಿತ್ತು. ಮದುವೆಯಲ್ಲಿ ಎಲ್ಲ ಶಾಸ್ತ್ರಗಳು ಮುಗಿದ ನಂತರ ಸರೋಜ್ ಸ್ವಲ್ಪ ಸಮಯ ಬಿಡುವು ಮಾಡಿಕೊಂಡು ಆ ಸಸಿಗಳನ್ನು ಮದುವೆಯಲ್ಲಿ ಭಾಗಿಯಾಗಿದ್ದ ಎಲ್ಲ ಅತಿಥಿಗಳಿಗೆ ಉಡುಗೊರೆಯಾಗಿ ನೀಡಿದ್ದರು.

ವಿವಿಧ ರೀತಿಯಲ್ಲಿ ಕೊಡುವ ವರದಕ್ಷಿಣೆಗೆ ನನ್ನ ವಿರೋಧವಿದೆ. ಆದರೆ ನಾನು ಪರಿಸರವನ್ನು ರಕ್ಷಿಸಲು ಹಾಗೂ ಸಮಾಜಕ್ಕೆ ಒಂದು ಒಳ್ಳೆಯ ಸಂದೇಶ ನೀಡಲು ಇಷ್ಟಪಡುತ್ತೇನೆ. ಹೀಗಾಗಿ ಸಂಬಂಧಿಕರಿಗೆ ಹಾಗೂ ಗ್ರಾಮಸ್ಥರಿಗೆ ಈ ಸಂದೇಶ ನೀಡೋಕೆ ನನ್ನ ಮದುವೆಗಿಂತ ಒಳ್ಳೆಯ ಅವಕಾಶವಿಲ್ಲ ಎಂದು ವರ ಸರೋಜ್ ತಿಳಿಸಿದ್ದಾರೆ.

ನಾನು ಹಾಗೂ ನನ್ನ ಪತ್ನಿ ವೃತ್ತಿಯಲ್ಲಿ ಶಿಕ್ಷಕರಾಗಿದ್ದು, ನಮ್ಮ ವಿದ್ಯಾರ್ಥಿಗಳಿಗೆ ಇದರಿಂದ ಒಳ್ಳೆಯ ಪ್ರೇರಣೆ ಸಿಗಲಿದೆ. ಸಸಿ ನೆಡುವುದರಿಂದ ಪರಿಸರವನ್ನು ಉಳಿಸಬಹುದು ಎಂದು ವರ ಸರೋಜ್ ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *