ತುಮಕೂರು: ಕುಣಿಗಲ್ ತಾಲೂಕಿನ ಬಿದನಗೆರೆ ಸತ್ಯಶನೇಶ್ವರ ಸ್ವಾಮಿ ದೇವಾಲಯದ ಧರ್ಮದರ್ಶಿ ಧನಂಜಯ ಅವರನ್ನು ಅಡ್ಡಗಟ್ಟಿ 13 ಲಕ್ಷ ಹಣ ದರೋಡೆ ಮಾಡಿದ್ದ 11 ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೀಪು, ವೆಂಕಟೇಶ್, ಶಿವು, ಸಾಗರ್, ಹೇಮಂತ್, ನಿತಿನ್, ವಿನಯ್, ಜಗದೀಶ್, ಭರತ್, ಸಂತೋಷ ಮತ್ತು ನಂದೀಶ್ ಬಂಧಿತ ಆರೋಪಿಗಳು. ಇನ್ನೂ ಇಬ್ಬರು ಆರೋಪಿಗಳು ತಲೆಮರೆಸಿಕೊಂಡಿದ್ದಾರೆ. ಈ ದರೋಡೆಯ ಮಾಸ್ಟರ್ ಪ್ಲಾನ್ ರೂಪಿಸಿದ್ದು, ಆರೋಪಿ ಮಡಕೆಹಳ್ಳಿ ಗ್ರಾಮದ ದೀಪು ಎಂದು ತಿಳಿದುಬಂದಿದೆ.
ಬಂಧಿತ ಆರೋಪಿಗಳಿಂದ 4.46 ಲಕ್ಷ ರೂ. ಹಣ, 34 ಲಕ್ಷ ರೂ. ಬೆಲೆಬಾಳುವ ಮೂರು ಕಾರು, ಎರಡು ಬೈಕ್ ಮತ್ತು 11 ಮೊಬೈಲ್ ಗಳನ್ನು ವಶ ಪಡಿಸಿಕೊಳ್ಳಲಾಗಿದೆ. ಪ್ರಮುಖ ಆರೋಪಿ ದೀಪು ಕುಣಿಗಲ್ ನಿವಾಸಿಯಾಗಿದ್ದು, ಉಳಿದ ಆರೋಪಿಗಳು ಬೆಂಗಳೂರಿನ ಕೊಳಚೆ ಪ್ರದೇಶ ನಿವಾಸಿಗಳಾಗಿದ್ದಾರೆ.
ದೋಚಿದ ಹಣವನ್ನು ಆರೋಪಿಗಳು ಹಂಚಿಕೆ ಮಾಡಿಕೊಂಡಿದ್ದಾರೆ. ಕೆಲವರು ಬ್ಯಾಂಕ್ ಸಾಲ ಕಟ್ಟಿದ್ದಾರೆ. ಮತ್ತೆ ಕೆಲವರು ಗೋವಾ ಪ್ರವಾಸಕ್ಕೆ ಹೋಗಿ ಮೋಜು ಮಾಡಿ ಲಕ್ಷಾಂತರ ಹಣ ಕಳೆದಿದ್ದಾರೆ. ಜೂನ್ 9 ರಂದು ರಾತ್ರಿ ಧನಂಜಯಸ್ವಾಮಿ ಆರೋಪಿಗಳು ಪೂಜೆ ಮಾಡಿಸುವ ನೆಪದಲ್ಲಿ ಕಾರು ಅಡ್ಡಗಟ್ಟಿದ್ದರು. ಬಳಿಕ ಪೆಪ್ಪರ್ ಸ್ಪ್ರೇ ಸಿಂಪಡಿಸಿ ಮಾರಕಾಸ್ತ್ರಗಳಿಂದ ಬೆದರಿಸಿ ಹಣದೊಂದಿಗೆ ಕಾರು ಅಪಹರಿಸಿದ್ದರು.