ಯುವ ಜೋಡಿಯ ಮೇಲೆ ನೈತಿಕ ಪೊಲೀಸ್ ಗಿರಿ- ದಾರಿ ಮಧ್ಯೆ ಅಡ್ಡಗಟ್ಟಿ ಮದುವೆ ಮಾಡಿಸಿದ್ರು!

Public TV
1 Min Read
moral policeing

ಗುವಾಹಟಿ: ಯುವಕರ ಗುಂಪೊಂದು ದಾರಿ ಮಧ್ಯೆ ಯುವ ಜೋಡಿಯನ್ನು ತಡೆದು ಹಲ್ಲೆ ನಡೆಸಿ ನೈತಿಕ ಪೊಲೀಸ್  ಗಿರಿ ಪ್ರರ್ಶಿಸಿದ ಘಟನೆ ಮಂಗಳವಾರ ಅಸ್ಸಾಂ ನ ಗೋಲ್ಪಾರಾ ಜಿಲ್ಲೆಯಲ್ಲಿ ನಡೆದಿದೆ.

ಅವಿವಾಹಿತ ಯುವಕ-ಯುವತಿ ಬೈಕ್‍ನಲ್ಲಿ ಹೋಗುತ್ತಿದ್ದ ಸಂದರ್ಭದಲ್ಲಿ ಜನರ ಗುಂಪೊಂದು ರಸ್ತೆ ಅಡ್ಡಗಟ್ಟಿದೆ. ಬಳಿಕ ಬಲವಂತವಾಗಿ ಬೈಕ್‍ನಿಂದ ಇಳಿಯುವಂತೆ ಹೇಳಿದ್ದಾರೆ. ಇಳಿದ ಬಳಿಕ ಅವರ ಮೇಲೆ ಹಲ್ಲೆ ನಡೆಸಿದ್ದಾರೆ. ಅಲ್ಲದೇ, ಜೋಡಿಯನ್ನು ಗ್ರಾಮಕ್ಕೆ ಕರೆದು ತಂದ ಯುವಕರ ಗುಂಪು, ಬಲವಂತವಾಗಿ ಮದುವೆ ಮಾಡಿಸಿದ್ದಾರೆ ಎಂದು ಹಲ್ಲೆಗೊಳಗಾದ ವ್ಯಕ್ತಿಯ ಸಹೋದರ ಹೇಳಿದ್ದಾರೆ.

ಸದ್ಯ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿರುವ ದೃಶ್ಯಗಳನ್ನು ಸ್ಥಳದಲ್ಲಿದ್ದ ಕೆಲವರು ಮೊಬೈಲ್‍ನಲ್ಲಿ ಸೆರೆಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ವ್ಯಕ್ತಿಯೊಬ್ಬ ಕೈಯಲ್ಲಿ ಕೋಲು ಹಿಡಿದು ಜೋಡಿಗೆ ಬೆದರಿಕೆ ಹಾಕಿ, ಯುವತಿಗೆ ಬಿದಿರು ಕೋಲಿನಿಂದ ಹಲ್ಲೆ ಮಾಡುತ್ತಿರುವ ದೃಶ್ಯವನ್ನು ಕಾಣಬಹುದಾಗಿದೆ.

moral attack

ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿರುವ ವಿಡಿಯೋ ಆಧರಿಸಿ ಘಟನೆಯಲ್ಲಿ ಜೋಡಿಯ ಮೇಲೆ ಹಲ್ಲೆ ನಡೆಸಿದ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಉಳಿದವರಿಗಾಗಿ ಹುಡುಕಾಟ ನಡೆಸುತ್ತಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ ಅಂತ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ಘಟನೆ ಕುರಿತು ಸ್ಪಷ್ಟನೆ ನೀಡಿರುವ ಪೊಲೀಸರು, ಈ ಕುರಿತು ತಮಗೇ ಯಾವುದೇ ದೂರು ಬಂದಿಲ್ಲ. ಆದರೆ ವಿಡಿಯೋ ಆಧರಿಸಿ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಳ್ಳಲಾಗಿದೆ. ಅಲ್ಲದೇ ಒಬ್ಬ ಆರೋಪಿಯನ್ನು ಶುಕ್ರವಾರ ಹಾಗೂ ಮತ್ತೊಬ್ಬನನ್ನು ಶನಿವಾರ ಬೆಳಗ್ಗೆ ಬಂಧಿಸಲಾಗಿದೆ ಎಂದು ಅಸ್ಸಾಂ ಡಿಜಿಪಿ ಕುಲಧರ್ ಸೈಕಿಯಾ ಹೇಳಿದ್ದಾರೆ.

ಇದೇ ಪ್ರದೇಶದಲ್ಲಿ ಕಳೆದ ಮೂರು ದಿನಗಳ ಹಿಂದೆ ಕಾರಿನಲ್ಲಿ ಚಲಿಸುತ್ತಿದ್ದ ಇಬ್ಬರು ವ್ಯಕ್ತಿಗಳನ್ನು ತೆಡೆದು ಮಕ್ಕಳ ಕಳ್ಳರು ಎಂದು ಹಲ್ಲೆ ನಡೆಸಿ ಕೊಲೆ ಮಾಡಿಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಯುವ ಜೋಡಿಯ ಮೇಲೆ ಹಲ್ಲೆ ನಡೆಸಿ ಮದುವೆ ಮಾಡಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *