ಬೆಂಗಳೂರು: ಎಂ ಕಾರ್ತಿಕ್ ನಿರ್ಮಾಣದ ಹೈಪರ್ ಚಿತ್ರ ಸದ್ಯ ಪ್ರೇಕ್ಷಕರ ವಲಯದಲ್ಲೊಂದು ಸಂಚಲನ ಸೃಷ್ಟಿಸಿದೆ. ಜೋಗಿ ಪ್ರೇಮ್ ಇತ್ತೀಚೆಗೆ ಈ ಚಿತ್ರದ ಹಾಡು ಮತ್ತು ಟ್ರೈಲರ್ ಬಿಡುಗಡೆ ಮಾಡಿದ್ದರು. ಅದಾಗಿ ಕೆಲವೇ ದಿನ ಕಳೆಯುವಷ್ಟರಲ್ಲಿಯೇ ಮೂರು ಲಕ್ಷಕ್ಕೂ ಅಧಿಕ ಜನ ನೋಡಿ ಮೆಚ್ಚಿಕೊಳ್ಳುವ ಮೂಲಕ ಹೈಪರ್ ಚಿತ್ರದ ಬಗ್ಗೆ ಎಲ್ಲೆಡೆ ನಿರೀಕ್ಷೆ ಹುಟ್ಟಿಕೊಂಡಿತ್ತು.
ಸದ್ಯ ಎಲ್ಲಾ ಕೆಲಸ ಕಾರ್ಯಗಳನ್ನು ಮುಗಿಸಿಕೊಂಡು ಇದೇ ತಿಂಗಳ 29ಕ್ಕೆ ತೆರೆ ಕಾಣಲು ಸಜ್ಜಾಗಿ ನಿಂತಿರೋ ಈ ಚಿತ್ರ ಎಂ ಬಿಗ್ ಪಿಕ್ಚರ್ಸ್ ಲಾಂಛನದಡಿಯಲ್ಲಿ ನಿರ್ಮಾಣಗೊಂಡಿದೆ. ಈಗಾಗಲೇ ತಮಿಳಿನಲ್ಲಿ ಮೂರು ಚಿತ್ರಗಳನ್ನು ನಿರ್ದೇಶನ ಮಾಡಿರುವ ಗಣೇಶ್ ವಿನಾಯಕ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಾಯಕ ನಟರಾದ ಅರ್ಜುನ್ ಆರ್ಯ ಅವರೇ ಕಥೆಯನ್ನೂ ಬರೆದಿರೋದು ವಿಶೇಷ.
ಇದೊಂದು ಕಾಲೇಜ್ ಲವ್ ಚಿತ್ರ. ಆದರೆ ಅದರಾಚೆಗಿನ ಊಹಿಸಲಸಾಧ್ಯವಾದ ತಿರುವು, ಸಾಹಸ, ಅಪ್ಪ ಮಗಳ ಸೆಂಟಿಮೆಂಟು ಸೇರಿದಂತೆ ಇಡೀ ಚಿತ್ರವನ್ನು ಸಮೃದ್ಧವಾಗಿ ರೂಪಿಸಿದ ಖುಷಿ ಚಿತ್ರತಂಡದ್ದು. ಕಥೆಗೆ ಪೂರಕವಾಗಿ ಈ ಚಿತ್ರದಲ್ಲಿ ಐದು ಚೆಂದದ ಹಾಡುಗಳಿವೆ. ಇಮ್ಮಾನ್ ಡಿ ಹಾಗೂ ಎಲ್ವಿನ್ ಆ ಐದೂ ಹಾಡುಗಳಿಗೆ ಸಂಗೀತ ಸಂಯೋಜನೆ ಮಾಡಿದ್ದಾರೆ. ಈಗಾಗಲೇ ಈ ಹಾಡುಗಳು ಮತ್ತು ಟ್ರೈಲರ್ ಗೆ ಗಣ್ಯರ ಕಡೆಯಿಂದಲೂ ಮೆಚ್ಚುಗೆಯ ಮಾತುಗಳು ಕೇಳಿ ಬರುತ್ತಿವೆ. ರವಿಶಂಕರ್ ಮತ್ತು ಚಿಕ್ಕಣ್ಣ ಮುಂತಾದ ನಟರೂ ಕೂಡಾ ಈ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ್ದಾರೆ.
ಶಕ್ತಿವೇಲ್ ಅವರ ಛಾಯಾಗ್ರಹಣ, ರುಬಾನ್ ಸಂಕಲನ, ಥ್ರಿಲ್ಲರ್ ಮಂಜು, ಮಾಸ್ ಮಾದ, ವಿಕ್ರಂ, ಹೈಪರ್ ಸೂರಿ ಸಾಹಸ ನಿರ್ದೇಶನ, ಕಲೈ ನೃತ್ಯ ನಿರ್ದೇಶನ ಹಾಗೂ ಕನಕ ಅವರ ಕಲಾ ನಿರ್ದೇಶನವಿರುವ ಈ ಚಿತ್ರದ ಹಾಡುಗಳನ್ನು ಎ.ಪಿ.ಅರ್ಜುನ್, ಬಹದ್ದೂರ್ ಚೇತನ್, ದಿಲ್‍ವಾಲ ಅನಿಲ್ ಹಾಗೂ ಗೌಸ್‍ಫಿರ್ ಬರೆದಿದ್ದಾರೆ. ಅರ್ಜುನ್ ಆರ್ಯ, ಶೀಲ, ರಂಗಾಯಣ ರಘು, ಶೋಭ್ ರಾಜ್, ಬುಲೆಟ್ ಪ್ರಕಾಶ್, ಅಚ್ಯುತ ಕುಮಾರ್, ಶ್ರೀನಿವಾಸಪ್ರಭು, ಬ್ಯಾಂಕ್ ಜನಾರ್ದನ್, ವೀಣಾಸುಂದರ್, ಲಕ್ಷ್ಮೀಸಿದ್ದಯ್ಯ, ಉಮೇಶ್ ಪುಂಗ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.