ಸಿದ್ದರಾಮಯ್ಯನವರ ಉತ್ತರಾಧಿಕಾರಿ ಯತೀಂದ್ರ ಅಲ್ಲ – ಕುರುಬ ಸಮುದಾಯದ ಯುವ ನಾಯಕನ ಮೇಲೆ ಮಾಜಿ ಸಿಎಂ ಕಣ್ಣು!

Public TV
2 Min Read
yatindra siddaramaiah e

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ನಂತರ ಕಾಂಗ್ರೆಸ್ ನಲ್ಲಿ ಅವರ ಉತ್ತರಾಧಿಕಾರಿ ಯಾರು ಎನ್ನುವ ಪ್ರಶ್ನೆಗೆ ಅವರ ಪುತ್ರ ಯತೀಂದ್ರ ಎಂದು ಸುಲಭವಾಗಿ ಉತ್ತರಿಸಬಹುದು. ಆದರೆ ಮಾಜಿ ಸಿಎಂ ನನ್ನ ಉತ್ತರಾಧಿಕಾರಿ ಯತೀಂದ್ರ ಅಲ್ಲ ಎನ್ನುವ ಸಂದೇಶವನ್ನು ನೀಡುತ್ತಿದ್ದಾರೆ.

ಹೌದು. ಸಾಮಾನ್ಯವಾಗಿ ತಂದೆ ಸಕ್ರೀಯ ರಾಜಕಾರಣದಲ್ಲಿದ್ದರೆ ಅವರ ಮಗ ಉತ್ತರಾಧಿಕಾರಿ ಎನ್ನುವ ಮಾತು ಪ್ರಚಲಿತದಲ್ಲಿದೆ. ಆದರೆ ಸಿಎಂ ತನ್ನ ಮಗನ ಬಗ್ಗೆ ಹೆಚ್ಚು ಒಲವು ತೋರಿಸದೇ ಬೆಂಗಳೂರಿನ ಕುರುಬ ಸಮುದಾಯ ಶಾಸಕರೊಬ್ಬರನ್ನು ಸದ್ದಿಲ್ಲದೇ ಪ್ರಚಾರಕ್ಕೆ ತರಲು ಮುಂದಾಗುತ್ತಿದ್ದಾರೆ.

ಸಿದ್ದರಾಮಯ್ಯ ಕಾಂಗ್ರೆಸ್ ಪಕ್ಷದಲ್ಲಿ ತಮ್ಮ ಪುತ್ರನಿಗಿಂತ ಹೆಚ್ಚಾಗಿ ಪ್ರೀತಿ ತೋರಿಸಿ ಯುವ ಶಾಸಕರೊಬ್ಬರನ್ನು ಬೆಳೆಸುತ್ತಿದ್ದಾರೆ. ಅವರೇ ಸಿದ್ದರಾಮಯ್ಯ ನಂತರದ ಉತ್ತರಾಧಿಕಾರಿ ಅಂತಾ ಹೇಳಲಾಗುತ್ತಿದೆ. ಎರಡನೇ ಹಂತದ ಸಚಿವ ಸಂಪುಟ ವಿಸ್ತರಣೆಯಲ್ಲಿ ಸಿದ್ದರಾಮಯ್ಯ ತಮ್ಮ ಮಗನಿಗೆ ಮಂತ್ರಿಗಿರಿ ಕೊಡಿಸುವಂತೆ ಒತ್ತಡ ಹೇರುತ್ತಿಲ್ಲ. ಬದಲಾಗಿ ನೀಲಿ ಕಣ್ಗಳ ಯುವ ನಾಯಕನಿಗೆ ಮಂತ್ರಿಗಿರಿ ನೀಡಬೇಕು ಅಂತಾ ಸ್ವತಃ ಕಾಂಗ್ರೆಸ್ ಹೈಕಮಾಂಡ್ ಗೆ ಒತ್ತಾಯ ಮಾಡಿದ್ದಾರೆ ಎಂದು ಮೂಲಗಳಿಂದ ತಿಳಿದುಬಂದಿದೆ.

bhairati siddu

ಹೆಬ್ಬಾಳ ಶಾಸಕರಾಗಿರುವ ಭೈರತಿ ಸುರೇಶ್ ಅವರ ಪರವಾಗಿ ಸಿದ್ದರಾಮಯ್ಯ ಈಗ ಹೆಚ್ಚಿನ ಒಲವು ತೋರುತ್ತಿದ್ದಾರೆ ಎನ್ನುವ ಮಾತು ಕೈ ವಲಯದಲ್ಲಿ ಹರಿದಾಡುತ್ತಿದೆ. ಪಕ್ಷದ ಕಷ್ಟಕಾಲದಲ್ಲಿ ಸಹಾಯಕ್ಕೆ ಬಂದ ಭೈರತಿ ಸುರೇಶ್ ರನ್ನು ಸಚಿವರನ್ನಾಗಿ ಮಾಡಲು ಸಿದ್ದರಾಮಯ್ಯ ಮುಂದಾಗಿದ್ದಾರೆ. ಅವರೇ ಸಿದ್ದರಾಮಯ್ಯ ನಂತರದ ಉತ್ತರಾಧಿಕಾರಿ ಎಂದು ಹೇಳಲಾಗುತ್ತಿದೆ. ಇದು ಕಾಂಗ್ರೆಸ್ ನ ಇನ್ನುಳಿದ ಕುರುಬ ಸಮುದಾಯದ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

ಸಿದ್ದರಾಮಯ್ಯ ಈ ನಡೆಯಿಂದ ಹೆಚ್.ಎಂ.ರೇವಣ್ಣ, ಶಾಸಕರಾದ ಶಿವಳ್ಳಿ, ಎಂ.ಟಿ.ಬಿ.ನಾಗರಾಜ್ ಪಕ್ಷದಲ್ಲಿ ತಮ್ಮ ಅಸ್ತಿತ್ವದ ಬಗ್ಗೆ ಭಯ ಪಡುವಂತಾಗಿದೆ. ಈ ಕಾರಣಕ್ಕೆ ಈಗ ಸಿದ್ದರಾಮಯ್ಯನವರೇ ನಮ್ಮ ಪಾಲಿಗೆ ವಿಲನ್ ಆಗಿದ್ದಾರೆ. ಮಂತ್ರಿ ಸ್ಥಾನಕ್ಕೆ ಸಿಎಂ ತಮ್ಮ ಪರವಾಗಿ ಮಾತನಾಡುತ್ತಿಲ್ಲ ಎಂದು ಕುರುಬ ಸಮಾಜದ ಶಾಸಕರು ತಮ್ಮ ಆಪ್ತರ ಜೊತೆ ಮಾತನಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಯಾಕೆ ನೀವು ಭೈರತಿ ಬಗ್ಗೆ ಹೆಚ್ಚಿನ ಒಲವು ತೋರಿಸುತ್ತಿದ್ದೀರಿ ಎಂದು ಸಿದ್ದರಾಮಯ್ಯನವರನ್ನು ಕೇಳಿದ್ದಕ್ಕೆ ತಮ್ಮ ಆಪ್ತರ ಬಳಿ, ಭೈರತಿ ಸುರೇಶ್ ಸ ಸಾಮಥ್ರ್ಯದಿಂದಲೇ ಪರಿಷತ್ ಸದಸ್ಯರಾಗಿದ್ದಾರೆ. ಹೆಬ್ಬಾಳ ಉಪ ಚುನಾವಣೆಯಲ್ಲಿ ಟಿಕೆಟ್ ತಪ್ಪಿದರೂ ನಿಷ್ಟೆಯಿಂದಲೇ ಪಕ್ಷಕ್ಕಾಗಿ ದುಡಿದಿದ್ದಾರೆ. ಯಾವುದೇ ಅಪಸ್ವರ ಎತ್ತದೇ ಶಿಸ್ತಿನಿಂದ ಪಕ್ಷ ಕಟ್ಟಿದ್ದಾರೆ. ಈ ಬಾರಿಯ ಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಗಳು ಸಂಕಷ್ಟಕ್ಕೆ ಸಿಕ್ಕಾಗ ಅವರಿಗೆ ಎಲ್ಲಾ ರೀತಿಯ ನೆರವು ನೀಡಿದ್ದಾರೆ. ಸಮುದಾಯದ ಉಳಿದ ಶಾಸಕರುಗಳು ಅವರವರ ಗೆಲುವಿಗಷ್ಟೆ ಸೀಮಿತರಾದರು. ಕಷ್ಟದಲ್ಲಿದ್ದಾಗ ಯಾರೂ ನೆರವಿಗೂ ಬರಲಿಲ್ಲ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ ಎನ್ನುವ ವಿಚಾರ ತಿಳಿದುಬಂದಿದೆ.

ಭೈರತಿ ಸುರೇಶ್ ಗೆ ಮಂತ್ರಿ ಸ್ಥಾನ ನೀಡಬೇಕು ಅಂತಾ ಸ್ವತಃ ಸಿದ್ದರಾಮಯ್ಯ ಕಾಂಗ್ರೆಸ್ ಹೈಕಮಾಂಡ್ ಗೆ ಮನವಿ ಕೂಡಾ ಮಾಡಿದ್ದಾರೆ ಎನ್ನಲಾಗಿದೆ. ತಮ್ಮ ಪುತ್ರನಿಗಿಂತ ಹೆಚ್ಚು ಪ್ರೀತಿ ತೋರಿಸಿ ಭವಿಷ್ಯದ ಸಮುದಾಯದ ನಾಯಕನನ್ನಾಗಿಸುವ ಯತ್ನದಲ್ಲಿದ್ದಾರೆ ಎನ್ನುವ ಮಾತುಗಳು ಸಿದ್ದರಾಮಯ್ಯ ಆಪ್ತ ವಲಯದಲ್ಲೇ ಈಗ ಕೇಳಿ ಬರುತ್ತಿದೆ.

Share This Article
Leave a Comment

Leave a Reply

Your email address will not be published. Required fields are marked *