ಚಿಕ್ಕಮಗಳೂರು/ರಾಮನಗರ: ಕಳೆದೊಂದು ವಾರದಿಂದ ಸುರಿಯುತ್ತಿದ್ದ ಧಾರಾಕಾರ ಮಳೆಗೆ ಚಿಕ್ಕಮಗಳೂರಿನ ಮಲೆನಾಡು ಭಾಗ ಅಕ್ಷರಶಃ ತತ್ತರಿಸಿಹೋಗಿತ್ತು. ಆದರೆ ಶುಕ್ರವಾರದಿಂದ ಮಳೆಯ ಪ್ರಮಾಣ ತಗ್ಗಿದೆ. ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದ ತುಂಗಾ-ಭದ್ರಾ ನದಿಗಳು ಶಾಂತವಾಗಿವೆ.
ಭಾರೀ ಮಳೆಯಿಂದ ಬಂದ್ ಆಗಿದ್ದ ಚಾರ್ಮಾಡಿ, ಕಳಸ, ಕುದುರೆಮುಖ ರಸ್ತೆ, ಕಳಸ ಹೊರನಾಡು ರಸ್ತೆ, ಶೃಂಗೇರಿ, ಮಂಗಳೂರು ರಸ್ತೆಯಲ್ಲಿಯೂ ಯಾವುದೇ ತೊಂದರೆ ಇಲ್ಲದೆ ವಾಹನಗಳು ಸಂಚರಿಸುತ್ತಿವೆ. ಇನ್ನು ಚಿಕ್ಕಮಗಳೂರು ಜಿಲ್ಲಾಧಿಕಾರಿ ಎಂ.ಕೆ ಶ್ರೀರಂಗಯ್ಯ ಹಾಗೂ ಶೃಂಗೇರಿ ಶಾಸಕ ಟಿ.ಡಿ ರಾಜೇಗೌಡ ಸಿಇಓ ಸತ್ಯಭಾಮ ಸೇರಿದಂತೆ ಅಧಿಕಾರಿಗಳು ಮಳೆಯಿಂದ ಹಾನಿಯಾಗಿದ್ದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ರೇಷ್ಮೆನಗರಿ ರಾಮನಗರದಲ್ಲಿ ಜೋರು ಗಾಳಿ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಗೆ ಮರ ಉರುಳಿಬಿದ್ದ ಘಟನೆ ನಡೆದಿದೆ. ನಗರದ ಹೈಜೂರು ವೃತ್ತದಲ್ಲಿದ್ದ ಮರ ಉರುಳಿಬಿದ್ದಿತ್ತು. ಜೋರು ಗಾಳಿಗೆ ಕಾರು ಹಾಗೂ ಟಾಟಾ ಏಸ್ ವಾಹನದ ಮುಂಭಾಗದ ಬಾನೆಟ್ ಮೇಲೆ ಮರ ಉರುಳಿಬಿದ್ದಿತ್ತು. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಇನ್ನೂ ಹೈಜೂರು ವೃತ್ತದಲ್ಲಿಯೇ ಮರದ ಪಕ್ಕದಲ್ಲಿದ್ದ ವಿದ್ಯುತ್ ಕಂಬ ಸಹ ಮುರಿದು ಆಟೋ ಮೇಲೆ ಬಿದ್ದು ಆಟೋ ಜಖಂಗೊಂಡಿದೆ.
ಬೆಂಗಳೂರು ಹೊರವಲಯ ಆನೇಕಲ್ ತಾಲೂಕಿನಾದ್ಯಂತ ಕಳೆದೊಂದು ವಾರದಿಂದ ಮೋಡಕವಿದ ವಾತಾವರಣವಿದ್ದು, ಶುಕ್ರವಾರ ಸಂಜೆ ಏಕಾಏಕಿ ಗಾಳಿ ಸಹಿತ ಮಳೆ ಸುರಿದ ಪರಿಣಾಮ ಸಾರ್ವಜನಿಕರು ಪರದಾಡುವಂತಾಯಿತು. ಆನೇಕಲ್ ತಾಲೂಕಿನ ಅತ್ತಿಬೆಲೆ ಅನೇಕಲ್ ಪಟ್ಟಣ, ಹೆಬ್ಬಗೋಡಿ, ಚಂದಾಪುರ ಹಾಗೂ ದೊಮ್ಮಸಂದ್ರ ಸುತ್ತ ಕಳೆದ ಮೂರು ಗಂಟೆಗಳಿಂದ ಮಳೆ ಸುರಿದಿದ್ದು, ದ್ವಿಚಕ್ರ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಗಿತ್ತು. ಇತ್ತ ವಿಜಯನಗರದಲ್ಲೂ ಭಾರೀ ಮಳೆಯಾಗಿದ್ದು, ವಾಹನ ಸವಾರರು ಪರದಾಡುವಂತಾಗಿತ್ತು.