ಬೆಂಗಳೂರು: ಬೆಳ್ಳಂದೂರು ಮತ್ತು ವರ್ತೂರು ಕೆರೆಗಳು ಬೆಂಗಳೂರಿನ ಅತಿದೊಡ್ಡ ಎರಡು ಸೆಪ್ಟಿಕ್ ಟ್ಯಾಂಕಗಳಂತೆ. ಕೆರೆಯಲ್ಲಿನ ಒಂದು ಮಿಲಿ ಲೀಟರ್ ನೀರು ಕೂಡಾ ಶುದ್ಧವಾಗಿಲ್ಲ ಅನ್ನೋ ಆಘಾತಕಾರಿ ಅಂಶವನ್ನು ವರದಿಯೊಂದು ತಿಳಿಸಿದೆ.
ರಾಷ್ಟ್ರೀಯ ಹಸಿರು ನ್ಯಾಯಾಧೀಕರಣ ಸೂಚನೆ ಮೇರೆಗೆ ಅಧ್ಯಯನ ನಡೆಸಿದ ಹಿರಿಯ ವಕೀಲರ ನೇತೃತ್ವದ ತಜ್ಞರ ತಂಡವೊಂದು ಈ ಆಘಾತ ಸುದ್ದಿ ಬಯಲು ಮಾಡಿದೆ. ಬೆಳ್ಳಂದೂರು ಮತ್ತು ವರ್ತೂರು ಕೆರೆ ಮಾಲಿನ್ಯದ ಕುರಿತು ಅಧ್ಯಯನ ಮಾಡಿದ ತಂಡ ಗುರುವಾರ ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ ತನ್ನ ವರದಿ ಸಲ್ಲಿಕೆ ಮಾಡಿದೆ.
ವರದಿಯಲ್ಲಿ ಕೆರೆ ವ್ಯಾಪ್ತಿಯ ಮನೆಗಳ ಚರಂಡಿ ನೀರೇ ಮಾಲಿನ್ಯಕ್ಕೆ ಮುಖ್ಯ ಕಾರಣ ಅಂತಾ ಉಲ್ಲೇಖಿಸಿದ್ದು, ಬೆಳ್ಳಂದೂರು ಮತ್ತು ವರ್ತೂರು ಕೆರೆಗಳನ್ನು ತಜ್ಞರು ಸೆಪ್ಟಿಕ್ ಟ್ಯಾಂಕ್ ಗೆ ಹೋಲಿಸಿದ್ದಾರೆ. ಕೆರೆ ತುಂಬಾ ಘನತಾಜ್ಯ ಹಾಗೂ ಕೊಳಚೆ ನೀರು ತುಂಬಿಕೊಂಡಿದೆ. ಒಟ್ಟು 906 ಎಕರೆ ಕೆರೆ ವಿಸ್ತಿರ್ಣದ ಬೆಳ್ಳಂದೂರು ಕೆರೆ ಪೈಕಿ 71.45 % ನಾಶವಾಗಿದೆ. ಕೆರೆಯಲ್ಲಿನ ಕಳೆ ತಗೆಯುವುದಕ್ಕಿಂತ ಹೆಚ್ಚು ವೇಗವಾಗಿ ಕಳೆ ಬೆಳೆಯುತ್ತಿದೆ ಅಂತಾ ವರದಿಯಲ್ಲಿ ವಿವರಿಸಲಾಗಿದೆ. ವರ್ತೂರು ಕೆರೆ ಡಂಪಿಂಗ್ ಯಾರ್ಡ್ ಆಗಿ ಪರಿವರ್ತನೆಯಾಗುತ್ತಿದೆ ಅಂತಾ ವರದಿಯಲ್ಲಿ ಅಸಮಾಧಾನ ವ್ಯಕ್ತಪಡಿಸಿದೆ.
ಕೆರೆಯ ನೀರಿನಲ್ಲಿರುವ ಗ್ರೀಸ್, ಆಯಿಲ್, ಮೀಥೇನ್ ಅಂಶಗಳಿಂದ ಬೆಂಕಿ ಕಾಣಿಸಿಕೊಳ್ಳುತ್ತಿದೆ ಎಂದು ಸಮಿತಿ ಹೇಳಿದೆ. ಅಗಸ್ಟ್ 12 ರ ಬಳಿಕ ಇದುವರೆಗೂ 12 ಬಾರಿ ಬೆಳಂದೂರು ಕೆರೆಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಸಮಸ್ಯೆ ಪರಿಹಾರಕ್ಕೆ ಕೆಲ ಸಲಹೆಗಳನ್ನು ಸಮಿತಿ ನೀಡಿದೆ. ಸದ್ಯ ವರದಿ ಕೊರ್ಟ್ ರಿಜಿಸ್ಟ್ರಾರ್ ಗೆ ಸಲ್ಲಿಕೆಯಾಗಿದ್ದು, ವರದಿ ಆಧರಿಸಿ ಜುಲೈ 18 ರಂದು ಹಸಿರು ನ್ಯಾಯಾಧೀಕರಣದಲ್ಲಿ ಅರ್ಜಿ ವಿಚಾರಣೆಗೆ ಬರಲಿದೆ.