ಹಳ್ಳಕ್ಕೆ ಬಿದ್ದ ಸ್ಕೂಲ್ ವ್ಯಾನ್- ಪ್ರಾಣವನ್ನೂ ಲೆಕ್ಕಿಸದೆ ಮಕ್ಕಳ ಜೀವ ಉಳಿಸಿ, ದಾದಿ ದುರ್ಮರಣ!

Public TV
1 Min Read
NANNY

ತಿರುವಂತನಪುರಂ: ರಸ್ತೆ ಅಪಘಾತದಲ್ಲಿ ದಾದಿಯೊಬ್ಬರು ತನ್ನ ಪ್ರಾಣವನ್ನು ಲೆಕ್ಕಿಸದೇ ಐದು ಮಕ್ಕಳ ಜೀವವನ್ನು ಉಳಿಸಿ ಬಳಿಕ ಮೃತಪಟ್ಟಿರುವ ಘಟನೆ ಕೇರಳದಲ್ಲಿ ನಡೆದಿದೆ.

ಕೇರಳದ ಮರಡು ಬಳಿಯ ಕಟ್ಟಿತ್ತರದಲ್ಲಿ ಈ ಘಟನೆ ನಡೆದಿದೆ. 35 ವರ್ಷದ ಲತಾ ಉಣ್ಣಿ, ಐದು ಮಕ್ಕಳ ಪ್ರಾಣ ಉಳಿಸಿ ಮೃತಪಟ್ಟ ದಾದಿ. ಸೋಮವಾರ ಸ್ಕೂಲ್ ವ್ಯಾನ್ `ಕಿಡ್ಜ್ ವರ್ಲ್ಡ್’ ಶಾಲೆಯಿಂದ ಎಂಟು ವಿದ್ಯಾರ್ಥಿಗಳನ್ನು ಹತ್ತಿಸಿಕೊಂಡು ಹೊರಟಿತ್ತು.

ಸುಮಾರು 3.45 ರ ವೇಳೆಗೆ ಕಟ್ಟಿತ್ತರ ರಸ್ತೆಯಲ್ಲಿ ವ್ಯಾನಿನ ಹಿಂಬದಿ ಚಕ್ರವು ಕೆಸರಿನಲ್ಲಿ ಸಿಲುಕಿದೆ. ನಂತರ ನಿಧಾನವಾಗಿ ಚಾಲಕ ತಿರುವು ತೆಗೆದುಕೊಳ್ಳಲು ಪ್ರಯತ್ನಿಸಿದ್ದಾನೆ. ಆಗ ವ್ಯಾನ್ ಕೊಳದಲ್ಲಿ ಬಿದ್ದಿದೆ. ಪರಿಣಾಮ ಎಲ್ಲಾ ಮಕ್ಕಳು ನೀರಿನಲ್ಲಿ ಮುಳುಗಿದ್ದರು. ಲತಾ ಉಣ್ಣಿ ಅವರು ಕಿಟಿಕಿಯಲ್ಲಿ ಸಿಲುಕಿಕೊಂಡಿದ್ದರು. ಕೊನೆಗೆ ನಾನು ಸಾಯುವ ಮುನ್ನ ಮಕ್ಕಳನ್ನು ಉಳಿಸೋಣ ಎಂದು ನಿರ್ಧಾರ ಮಾಡಿದ್ದು, ಅವರು ಒಬ್ಬರಂತೆ ಐದು ಮಕ್ಕಳನ್ನು ಕಿಟಿಕಿಯಿಂದ ಹೊರಗೆ ತಳ್ಳಿ ಅವರ ಜೀವವನ್ನು ಕಾಪಾಡಿದ್ದಾರೆ.

ಅಲ್ಲೇ ಇದ್ದ ಸ್ಥಳೀಯರು ಗಮನಿಸಿ ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿ ಆ ಮಕ್ಕಳನ್ನು ಕಾಪಾಡಿದ್ದಾರೆ. ಈ ವೇಳೆ ಅವರು ಕಿಟಕಿಯಲ್ಲಿ ಸಿಲುಕಿಕೊಂಡಿದ್ದು, ಪ್ರಜ್ಞಾಹೀನರಾಗಿದ್ದರು. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ರವಾನಿಸಲಾಗಿದೆ. ಈ ಎಲ್ಲಾ ದೃಶ್ಯಗಳು ಸಮೀಪದ ಮನೆಯೊಂದರ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಪಘಾತದಲ್ಲಿ ಗಾಯಗೊಂಡಿದ್ದ ವಾಹನ ಚಾಲಕ ಅನಲ್ಕುಮಾರ್ ನನ್ನು ಐಸಿಯುನಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಅಪಘಾತದಲ್ಲಿ ರಕ್ಷಿಸಿದ ಐದು ಮಕ್ಕಳು ಸುರಕ್ಷಿತರಾಗಿದ್ದು, ಅವರ ಪೋಷಕರು ಬಂದು ಕರೆದುಕೊಂಡು ಹೋಗುವವರೆಗೂ ಸಮೀಪದ ಒಂದು ಮನೆಯಲ್ಲಿ ಮಕ್ಕಳನ್ನು ಇರಿಸಲಾಗಿತ್ತು. ಆದರೆ ಈ ಘಟನೆಯಿಂದ 4 ವರ್ಷದ ವಿದ್ಯಾ ಲಕ್ಷ್ಮೀ ಮತ್ತು ಆದಿತ್ಯ ಎಸ್. ನಾಯರ್ ಸೇರಿದಂತೆ ಲತಾ ಉಣ್ಣಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.

ಲತಾ ಉಣ್ಣಿಗೆ ಇಬ್ಬರು ಅವಳಿ ಹೆಣ್ಣು ಮಕ್ಕಳಿದ್ದು, ಅವರ ಪತಿ ಕೆಎಲ್ ಅವರು ದೈನಂದಿನ ವೇತನ ಕಾರ್ಮಿಕರಾಗಿದ್ದಾರೆ. ಇವರು ಐದು ವರ್ಷಗಳಿಂದ `ಕಿಡ್ಜ್ ವರ್ಲ್ಡ್’ ಶಾಲೆಯಲ್ಲಿ ಕೆಲಸ ಮಾಡುತ್ತಿದ್ದರು.

Share This Article
Leave a Comment

Leave a Reply

Your email address will not be published. Required fields are marked *