ಶ್ರೀನಗರ: ಹಿಜ್ಬುಲ್ ಮುಜಾಹಿದ್ದೀನ್ ಭಯೋತ್ಪಾದಕ ಸಂಘಟನೆಯ ಉಗ್ರ ಸಮೀರ್ ಟೈಗರ್ ನನ್ನು ಎನ್ ಕೌಂಟರ್ ನಲ್ಲಿ ಹತ್ಯೆಗೈದಿದ್ದ ಭಾರತೀಯ ಸೇನಾ ಪಡೆಯ ಯೋಧರೊಬ್ಬರನ್ನು ಜಮ್ಮು ಕಾಶ್ಮೀರದ ಪುಲ್ವಾಮಾ ದಿಂದ ಅಪಹರಿಸಲಾಗಿದೆ.
ಅಪಹರಣಗೊಂಡ ಯೋಧನನ್ನು ಔರಂಗಜೇಬ್ ಎಂದು ಗುರುತಿಸಲಾಗಿದ್ದು ಪೂಂಚ್ ನ ನಿವಾಸಿಯಾಗಿದ್ದರು. ಕೆಲಸ ಮುಗಿಸಿ ಮನೆಗೆ ತೆರಳುವ ವೇಳೆ ಪುಲ್ವಾಮಾದಲ್ಲಿ ಶಸ್ತ್ರ ಸಜ್ಜಿತ ಉಗ್ರರು ಸುತ್ತುವರಿದು ಅಪಹರಣ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
23 ರಾಷ್ಟ್ರೀಯ ರೈಫಲ್ಸ್ ಗೆ ಸೇರಿದವರಾಗಿರುವ ಔರಂಗಜೇಬ್ ಅಪಹರಣದ ತನಿಖೆಯನ್ನು ಜಮ್ಮು ಕಾಶ್ಮೀರದ ಪೊಲೀಸರು ಶುರುಮಾಡಿದ್ದಾರೆ. ಕಳೆದ ಕೆಲವು ವಾರಗಳ ಹಿಂದೆಯಷ್ಟೇ ಮೋಸ್ಟ್ ವಾಂಟೆಡ್ ಉಗ್ರ ಸಮೀರ್ ಟೈಗರ್ ಹಾಗೂ ಮತ್ತೋರ್ವ ಉಗ್ರನನ್ನು ಪುಲ್ವಾಮಾದಲ್ಲಿ ನಡೆಸಿದ ಎನ್ ಕೌಂಟರ್ ನಲ್ಲಿ ಹತ್ಯೆಗೈಯಲಾಗಿತ್ತು.
ಉಗ್ರ ಚಟುವಟಿಕೆಗಳನ್ನು ಮಟ್ಟ ಹಾಕಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸೇನೆ ಮತ್ತು ಇತರ ಭದ್ರತಾ ಸಂಸ್ಥೆಗಳಿಗೆ ಕೇಂದ್ರ ಸರ್ಕಾರ ಅನುಮತಿಯನ್ನು ನೀಡಿತ್ತು. ಸಮೀರ್ ನ ಎನ್ ಕೌಂಟರ್ ಹಿಜ್ಬುಲ್ ಮುಜಾಯಿದ್ದೀನ್ ಸಂಘಟನೆಗೆ ಭಾರಿ ಹಿನ್ನೆಡೆಯಾಗಿತ್ತು.