ವಿಶ್ವದ ಅತಿ ವೇಗದ ಸೂಪರ್ ಕಂಪ್ಯೂಟರ್ ಅಮೆರಿಕದಲ್ಲಿ ಅಭಿವೃದ್ಧಿ: ಸ್ಪೀಡ್ ಎಷ್ಟಿದೆ? ಕೂಲ್ ಮಾಡಲು 1 ನಿಮಿಷಕ್ಕೆ ಎಷ್ಟು ನೀರು ಬೇಕು?

Public TV
2 Min Read
summit

ನವದೆಹಲಿ: ಅಮೆರಿಕ ಇಂಧನ ಇಲಾಖೆಯ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ವಿಶ್ವದಲ್ಲೇ ಅತಿ ವೇಗದ ಸೂಪರ್ ಕಂಪ್ಯೂಟರ್ `ಸಮಿತ್’ ಅನ್ನು ಅಭಿವೃದ್ಧಿಪಡಿಸಿದೆ.

ವಿಜ್ಞಾನದಲ್ಲಿನ ಆವಿಷ್ಕಾರಗಳಿಗೆ ಅಭೂತಪೂರ್ವ ಸಾಮಥ್ರ್ಯ ಇರುವ ಸೂಪರ್ ಕಂಪ್ಯೂಟರ್ ಗಳ ಅವಶ್ಯಕತೆ ಇದೆ. ಹಾಗಾಗಿ ಓಕ್ ರಿಡ್ಜ್ ನ್ಯಾಷನಲ್ ಲ್ಯಾಬೊರೇಟರಿ ಸಮಿತ್ ಅನ್ನು ಬಿಡುಗಡೆ ಮಾಡಿದೆ. ಈ ಹಿಂದಿನ ಟೈಟಾನ್ ಸೂಪರ್ ಕಂಪ್ಯೂಟರ್ ಗಿಂತ 8 ಪಟ್ಟು ವೇಗವಾಗಿ ಸಮಿತ್ ಕೆಲಸ ನಿರ್ವಹಿಸುತ್ತದೆ.

ಸಮಿತ್ ನ ಕಾರ್ಯನಿರ್ವಹಣಾ ಸಾಮರ್ಥ್ಯ 200 ಪೆಟಾ ಫ್ಲಾಪ್ಸ್ ಆಗಿದ್ದು 5 ವರ್ಷ ಹಿಂದಿನ ಚೈನಾದ 93 ಪೆಟಾ ಫ್ಲಾಪ್ಸ್ ಸಾಮಥ್ರ್ಯದ ತೈಹುಲೈಟ್ ಸೂಪರ್ ಕಂಪ್ಯೂಟರ್ ಅನ್ನು ಹಿಂದಿಕ್ಕಿದೆ. ವಿಜ್ಞಾನಿಗಳು ಸಮಿತ್ ಅನ್ನು ತಮ್ಮ ಜಿನೋಮ್ ಗಳ ಅಧ್ಯಯನದಲ್ಲಿ ಬಳಸಿದ್ದಾರೆ. ಹಿಂದಿನ ಸೂಪರ್ ಕಂಪ್ಯೂಟರ್ ಗಳಿಗಿಂತ ಕ್ಷಣಮಾತ್ರದಲ್ಲಿ ಲಕ್ಷಾಂತರ ಜಿನೋಮ್ ಗಳ ಬಗ್ಗೆ ಮಾಹಿತಿ ಪಡೆಯಬಹುದಾಗಿದೆ ಎಂದು ತಿಳಿಸಿದ್ದಾರೆ.

ಆರೋಗ್ಯ, ಕೃತಕ ಬುದ್ಧಿಮತ್ತೆ, ಶಕ್ತಿ, ಹವಾಮಾನ, ಭೌತಶಾಸ್ತ್ರ ಹಾಗೂ ಇತರ ಸಂಶೋಧನ ಕ್ಷೇತ್ರಗಳಲ್ಲಿ ಬೇಕಾಗಿದ್ದ ನಂಬಲು ಅಸಾಧ್ಯವಾದ ಸೂಪರ್ ಕಂಪ್ಯೂಟರ್ ಸಮಿತ್ ಆಗಿದೆ. ಈ ಸಂಶೋಧನೆಗಳಿಂದ ಬ್ರಹ್ಮಾಂಡವನ್ನು ಇನ್ನೂ ಸರಿಯಾಗಿ ಅರ್ಥೈಸಬಹುದಾಗಿದ್ದು ಅಮೆರಿಕಾದ ಆರ್ಥಿಕ ವ್ಯವಸ್ಥೆಯನ್ನು ಇನ್ನೂ ಸ್ಪರ್ಧಾತ್ಮಕವಾಗಿಸುವುದರ ಜೊತೆಗೆ ಉತ್ತಮ ಭವಿಷ್ಯಕ್ಕೆ ಸಹಾಯವಾಗಲಿದೆ.

4,608 ಸರ್ವರ್ ಗಳನ್ನು ಹೊಂದಿರುವ ಸಮಿತ್ 2 ಟೆನ್ನಿಸ್ ಕೋರ್ಟ್‍ಗಳ ಜಾಗವನ್ನು ತೆಗೆದುಕೊಳ್ಳಲಿದೆ. 9 ಸಾವಿರ 22-ಕೋರ್ ಐಬಿಎಂ ಪವರ್ 9 ಪ್ರೊಸೆಸರ್ ಗಳನ್ನು ಒಳಗೊಂಡಿದ್ದೂ 27 ಸಾವಿರಕ್ಕೂ ಹೆಚ್ಚು ಎನ್ವಿಡಿಯಾ ಟೆಸ್ಲಾ ವಿ100 ಗ್ರಾಫಿಕ್ ಪ್ರೊಸೆಸರ್ ಗಳನ್ನು ಹೊಂದಿದೆ. ಇಡೀ ವ್ಯವಸ್ಥೆಯನ್ನು ತಂಪಾಗಿಡಲು ಒಂದು ನಿಮಿಷಕ್ಕೆ 15 ಸಾವಿರ ಲೀಟರ್ ನಷ್ಟು ನೀರು ಬೇಕಾಗುತ್ತದೆ. 8100 ಮನೆಗಳು ಬಳಸುವಷ್ಟು ವಿದ್ಯುತ್ ಅನ್ನು ಸಮಿತ್ ಬಳಸುತ್ತದೆ.

SUPER COMPUTER

ಅಮೆರಿಕಾ, ಚೈನಾ ದೇಶಗಳಲ್ಲದೆ ಯುರೋಪ್, ಜಪಾನ್ ಹಾಗೂ ಇತರ ದೇಶಗಳ ನಡುವೆ ವೇಗದ ಸೂಪರ್ ಕಂಪ್ಯೂಟರ್ ತಯಾರು ಮಾಡಲು ಸ್ಪರ್ಧೆ ಏರ್ಪಟ್ಟಿದೆ. ಆರೋಗ್ಯ, ಪರಿಸರ ಕ್ಷೇತ್ರಗಳಲ್ಲದೆ ವಿಮಾನ ವಿನ್ಯಾಸ, ಪರಮಾಣು ಶಸ್ತ್ರಾಸ್ತ್ರಗಳ ತಯಾರಿಕೆಯಲ್ಲೂ ಸೂಪರ್ ಕಂಪ್ಯೂಟರ್ ಗಳನ್ನು ಬಳಸಲಾಗುತ್ತದೆ.

ಕಂಪ್ಯೂಟರ್ ಸಾಮಥ್ರ್ಯ ಮತ್ತು ಫ್ಲಾಪ್ಸ್
ಫ್ಲಾಪ್ಸ್ (FLOPS) ಎಂದರೆ ಕಂಪ್ಯೂಟರ್ ನ ಸಾಮರ್ಥ್ಯ ಅಳೆಯಲು ಬಳಸುವ ಮಾನದಂಡ. ಫ್ಲೋಟಿಂಗ್ ಪಾಯಿಂಟ್ ಆಪರೇಷನ್ಸ್ ಪರ್ ಸೆಕೆಂಡ್ (Floating Point Operations per Second) ಎಂಬುದು ಇದರ ವಿಸ್ತೃತ ರೂಪ. ಅಂದರೆ, ಒಂದು ಸೆಕೆಂಡ್ ಅವಧಿಯಲ್ಲಿ ಲೆಕ್ಕ ಮಾಡುವ ಕಂಪ್ಯೂಟರ್ ನ ಸಾಮರ್ಥ್ಯ. ಕಂಪ್ಯೂಟರ್ ನ ಕಾರ್ಯನಿರ್ವಹಣಾ ಸಾಮರ್ಥ್ಯ ಒಂದು ಪೆಟಾ ಫ್ಲಾಪ್ಸ್ ಇದ್ದರೆ ಆ ಕಂಪ್ಯೂಟರ್ ಒಂದು ಸೆಕೆಂಡ್‍ನಲ್ಲಿ ಸಾವಿರ ಲಕ್ಷಕೋಟಿಗಳಷ್ಟು ಲೆಕ್ಕಾಚಾರ ಮಾಡುವ ಸಾಮರ್ಥ್ಯ ಹೊಂದಿದೆ ಎಂದರ್ಥ.

Share This Article
Leave a Comment

Leave a Reply

Your email address will not be published. Required fields are marked *