ಬೆಂಗಳೂರು: ರಾಜಭವನದ ಸಿಬ್ಬಂದಿ ವರ್ತನೆಗೆ ಸ್ಪೀಕರ್ ರಮೇಶ್ ಕುಮಾರ್ ಆಕ್ರೋಶಗೊಂಡ ಘಟನೆ ಇಂದು ನಡೆಯಿತು.
ಜೆಡಿಎಸ್ – ಕಾಂಗ್ರೆಸ್ ಶಾಸಕರ ಪ್ರಮಾಣವಚನ ಸ್ವೀಕಾರ ಸಮಾರಂಭ ಇಂದು ಗಾಜಿನ ಮನೆಯಲ್ಲಿ ಆಯೋಜನೆಗೊಂಡಿತ್ತು. ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ರಮೇಶ್ ಕುಮಾರ್ ಆಗಮಿಸಿದ್ದರು.
ಪ್ರವೇಶದ ವೇಳೆ ರಾಜಭವನದ ಸಿಬ್ಬಂದಿ ರಮೇಶ್‍ಕುಮಾರ್ ಅವರನ್ನು ಒಳಗಡೆ ಬಿಡದೇ ತಡೆದಿದ್ದಾರೆ. ನಾನು ಸ್ಪೀಕರ್, ಹಾಲಿ ಶಾಸಕ ಎಂದು ರಮೇಶ್ ಕುಮಾರ್ ಹೇಳಿದರೂ ಒಳಗಡೆ ಬಿಡಲೇ ಇಲ್ಲ.
ಎಷ್ಟು ಹೇಳಿದರೂ ಕೇಳದೇ ಇದ್ದಾಗ ಆಕ್ರೋಶಗೊಂಡ ರಮೇಶ್ ಕುಮಾರ್ ರಾಜಭವನದ ಸಿಬ್ಬಂದಿ ವಿರುದ್ಧ ರೇಗಾಡಿದ್ದಾರೆ. ಕೊನೆಗೆ ಸಿಬ್ಬಂದಿ ಒಳಗಡೆ ಪ್ರವೇಶಿಸಲು ಅನುಮತಿ ನೀಡಿದರು.
ಮೈತ್ರಿ ಸರ್ಕಾರದ ಸ್ಪೀಕರ್ ಆಗಿ ರಮೇಶ್ ಕುಮಾರ್ ಅವಿರೋಧವಾಗಿ ಆಯ್ಕೆ ಆಗಿದ್ದರು. ಬಿಜೆಪಿಯಿಂದ ಸುರೇಶ್ ಕುಮಾರ್ ಸ್ಪರ್ಧಿಸಿದ್ದರೂ ಕೊನೆ ಕ್ಷಣದಲ್ಲಿ ಹಿಂದಕ್ಕೆ ಸರಿದ ಕಾರಣ ರಮೇಶ್ ಕುಮಾರ್ ಅವಿರೋಧವಾಗಿ ನೇಮಕವಾಗಿದ್ದರು.