ಯೂಟ್ಯೂಬ್ ನೋಡಿ ಡ್ರ್ಯಾಗನ್ ಫ್ರೂಟ್ ಬೆಳೆದ ರಾಜ್ಯದ ರೈತ..!

Public TV
4 Min Read
DRAGON FRUIT

ಚಿಕ್ಕಬಳ್ಳಾಪುರದ ರೈತ ನಾರಾಯಣಸ್ವಾಮಿಯ ಸಾಧನೆ

ಪಬ್ಲಿಕ್ ಟಿವಿ ವಿಶೇಷ ವರದಿ
ಚಿಕ್ಕಬಳ್ಳಾಪುರ: ತರಕಾರಿಗಳ ತವರೂರು, ಹೈನೋದ್ಯಮವನ್ನೇ ನೆಚ್ಚಿಕೊಂಡಿರುವ ಕ್ಷೀರಸಾಗರದ ಮೂಲ, ದ್ರಾಕ್ಷಿಯ ಕಣಜ, ಹೂವಿನ ಲೋಕ… ಹೀಗೆ ತರಹೇವಾರಿ ತರಕಾರಿ, ಹಣ್ಣು, ಹೂ ಬೆಳೆಯೋದ್ರಲ್ಲಿ ಚಿಕ್ಕಬಳ್ಳಾಪುರದ ರೈತರದ್ದು ಎತ್ತಿದ ಕೈ. ಕುಡಿಯೋಕೆ ಶುದ್ಧ ನೀರಿಲ್ಲ, ಬೆಳೆ ಬೆಳೆಯೋಕೆ ಅಂತೂ ನೀರಿಗೆ ಬರ, ಆದ್ರೆ ಬರದ ನಾಡು ಬಯಲುಸೀಮೆಯ ರೈತರ ಶ್ರಮಕ್ಕೆ ಮಾತ್ರ ಕೊನೆ ಇಲ್ಲ. ಕಷ್ಟಕಾಲದಲ್ಲೂ ಭಿನ್ನ ವಿಭಿನ್ನ ಪ್ರಯತ್ನಗಳಿಂದಲೇ ಸಾಧನೆ ಮಾಡೋದು ಚಿಕ್ಕಬಳ್ಳಾಪುರದ ರೈತರ ಸ್ಪೆಷಾಲಿಟಿ, ಹೌದು, ಸದಾ ಭಿನ್ನ-ವಿಭಿನ್ನ ಆಲೋಚನೆಗಳಿಂದಲೇ ಮನಸ್ಸಿದ್ದರೆ ಮಾರ್ಗ ಎಂಬಂತೆ ಸಾಧನೆಯ ಹಾದಿಯಲ್ಲಿ ಸಾಗೋ ಪ್ರಗತಿಪರ ರೈತರಿಗೆ ಮಾತ್ರ ಜಿಲ್ಲೆಯಲ್ಲಿ ಬರ ಇಲ್ಲ. ರಾಜ್ಯದಲ್ಲೇ ಮೊಟ್ಟ ಮೊದಲ ಬಾರಿಗೆ ಸೋಲಾರ್ ರೂಫ್ ಟಾಪ್ ಯೋಜನೆಯ ಮೂಲಕ ಸೌರ ವಿದ್ಯುತ್ ಉತ್ಪಾದನೆ ಮಾಡಿ ಮಾದರಿಯಾಗಿದ್ದ ಮರಳಕುಂಟೆಯ ರೈತ ನಾರಾಯಣಸ್ವಾಮಿಯವರ ಯಶೋಗಾಥೆಯ ಕಥೆ ಇದು. ಸರ್ಕಾರವನ್ನು ನಂಬಿ ಸೋಲಾರ್ ರೂಫ್ ಟಾಫ್ ಯೋಜನೆಗೆ ಕೋಟಿ ಕೋಟಿ ಬಂಡವಾಳ ಹೂಡಿ ಕೈ ಸುಟ್ಟುಕೊಂಡರೂ ಎದೆಗುಂದದ ಸ್ವಾಭಿಮಾನದ ಬದುಕು ನಾರಾಯಣಸ್ವಾಮಿಯವರದ್ದು. ಸೋಲಾರ್ ಲಾಸ್ ಆಯ್ತು ಅಂತ ಸುಮ್ಮನೆ ಕೂರದ ರೈತ, ಯೂಟ್ಯೂಬ್ ವೀಡಿಯೋ ನೋಡಿ ವಿದೇಶದಲ್ಲಿ ಬೆಳೆಯಲಾಗುತ್ತಿದ್ದ ಡ್ರ್ಯಾಗನ್ ಅನ್ನೋ ಫಾರಿನ್ ಫ್ರೂಟ್ ಬಯಲುಸೀಮೆಯಲ್ಲಿ ಬೆಳೆದು ಸೈ ಎನಿಸಿಕೊಂಡಿದ್ದಾರೆ ನಾರಾಯಣಸ್ವಾಮಿ.

DRAGON FRUIT 1

ಏನಿದು ಡ್ರ್ಯಾಗನ್ ಫ್ರೂಟ್..?
ರಾಜ್ಯದಲ್ಲೇ ಮೊದಲ ಬಾರಿಗೆ ಬಯಲು ಸೀಮೆಯಲ್ಲಿ ಫಾರಿನ್ ತಳಿಯ ಹಣ್ಣು ಬಿಟ್ಟಿದ್ದು, ಅತಿ ಹೆಚ್ಚು ಬೇಡಿಕೆ ಇರುವ ಡ್ರ್ಯಾಗನ್ ಹಣ್ಣು ಚಿಕ್ಕಬಳ್ಳಾಪುರ ತಾಲೂಕಿನ ಮರಳುಕುಂಟೆಯಲ್ಲಿ ಮಾರಾಟಕ್ಕೆ ಸಿದ್ಧಗೊಂಡಿದೆ. ಹೌದು, ನೀರಿನ ಸೆಲೆಯೇ ಇಲ್ಲದ ಚಿಕ್ಕಬಳ್ಳಾಪುರ ಈಗಾಗಲೇ ದ್ರಾಕ್ಷಿ, ತರಕಾರಿ, ಹೂಗಳನ್ನು ಬೆಳೆದು ಸೈ ಎನ್ನಿಸಿಕೊಂಡಿದೆ. ಇದೀಗ ಡ್ರ್ಯಾಗನ್ ಫ್ರೂಟ್ ರಾಷ್ಟ್ರೀಯ ಮಾರುಕಟ್ಟೆಗೆ ಪೈಪೋಟಿ ನೀಡಲು ಮೈದುಂಬಿ ನಿಂತಿದೆ. ರಾಜ್ಯದಲ್ಲೇ ಮೊದಲ ಪ್ರಯೋಗ ಎನ್ನಲಾಗುತ್ತಿರುವ ಡ್ರ್ಯಾಗನ್ ಫ್ರೂಟ್ ಬೆಳೆ ಬೆಳೆಯುವಲ್ಲಿ ಪ್ರಗತಿಪರ ರೈತ ನಾರಾಯಣಸ್ವಾಮಿ ಯಶಸ್ವಿಯಾಗಿದ್ದಾರೆ. ಅಮೆರಿಕಾ ಮೂಲದ ಈ ಡ್ರ್ಯಾಗನ್ ಫ್ರೂಟ್ ಸದ್ಯಕ್ಕೆ ರಷ್ಯಾ, ಜಪಾನ್‍ಗಳಲ್ಲಿ ಹೆಚ್ಚಾಗಿ ಬೆಳೆಯುತ್ತಾರೆ. ಕಿವಿ ಹಣ್ಣಿನ ಮಾದರಿಯಲ್ಲೇ ಬಹುಪಯೋಗಿಯಾಗಿರುವ ಈ ಹಣ್ಣಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಭರ್ಜರಿ ಡಿಮ್ಯಾಂಡ್. ಆನ್‍ಲೈನ್ ಮಾರುಕಟ್ಟೆಗಳಲ್ಲಿ ಒಂದು ಕೆಜಿ ಡ್ರ್ಯಾಗನ್ ಫ್ರೂಟ್ ಬೆಲೆ ಬರೋಬ್ಬರಿ 100ರಿಂದ 120 ರೂ.ಗಳವರೆಗೂ ಮಾರಾಟಗೊಳ್ಳುತ್ತಿದೆ. ಬೆಂಗಳೂರಿನ ಮಾಲ್‍ಗಳಲ್ಲಿ ದೊರೆಯುವ ಈ ಹಣ್ಣುಗಳನ್ನು ವಿದೇಶಗಳಿಂದಲೇ ಆಮದು ಮಾಡಿಕೊಳ್ಳಲಾಗುತ್ತದೆ. ದೇಶದ ಪಂಜಾಬ್, ಮಹಾರಾಷ್ಟ್ರಗಳಲ್ಲಿ ಮಾತ್ರವೇ ಈ ತಳಿಯನ್ನು ಬೆಳೆಯಲಾಗುತ್ತಿದ್ದರೂ, ಬೇಡಿಕೆಗೆ ಅನುಗುಣವಾಗಿ ಪೂರೈಸಲಾಗುತ್ತಿಲ್ಲ. ರಾಜ್ಯದ ಉತ್ತರ ಕರ್ನಾಟಕದ ಸಿರಗುಪ್ಪ ಬಳಿ ರೈತರೊಬ್ಬರು ಅತ್ಯಲ್ಪ ಪ್ರಮಾಣದಲ್ಲಿ ಬೆಳೆದಿದ್ದಾರೆ ಎನ್ನಲಾಗುತ್ತಿದೆ. ಅವರನ್ನು ಹೊರತು ಪಡಿಸಿದರೆ, ದೊಡ್ಡ ಪ್ರಮಾಣದಲ್ಲಿ ಡ್ರ್ಯಾಗನ್ ಫ್ರೂಟ್ ಬೆಳೆದ ಕೀರ್ತಿ ಬಯಲು ಸೀಮೆಗೆ ಸೇರಿದೆ.

DRAGON FRUIT 3
ಡ್ರ್ಯಾಗನ್ ಫ್ರೂಟ್ ವಿಶೇಷತೆ ಏನು?
ಕಡಿಮೆ ಕ್ಯಾಲೋರಿ ಹೊಂದಿರುವ ಈ ಹಣ್ಣು ಅನೇಕ ರೋಗಗಳಿಗೆ ರಾಮಬಾಣವಂತೆ. ಇದರಲ್ಲಿ ಹೆಚ್ಚಿನ ನಾರಿನಾಂಶ, ಪ್ರೋಟೀನ್ಸ್, ಲಿಯೋ ಕ್ಯಾಪಸ್, ವಿಟಮಿನ್-ಸಿ, ಕಾರ್ಟಿನ್ ಸೇರಿದಂತೆ ಅನೇಕ ಖನಿಜಾಂಶಗಳಾದ ಕ್ಯಾಲ್ಸಿಯಂ, ಫಾಸ್ಪರಸ್, ಕಬ್ಬಿಣಾಂಶ, ಪೋಟೋ ನ್ಯೂಟ್ರಿಯೆಂಟ್ಸ್, ಓಮೇಗಾ-3 ಮತ್ತು ಒಮೇಗಾ-6 ಫೇತ್ ಆಸಿಡ್ಸ್ ಅಂಶ ಇದೆ. ಹೀಗಾಗಿ ಇದರ ಒಂದು ಹಣ್ಣು ಸಾವಿರ ಮಾತ್ರೆಗಳಿಗೆ ಸಮ ಎನ್ನಲಾಗುತ್ತಿದೆ.

ಪ್ರಗತಿ ಪರ ರೈತ ನಾರಾಯಣಸ್ವಾಮಿ ಸಾಧನೆ..!
ಮರಳುಕುಂಟೆ ಗ್ರಾಮದ ನಾರಾಯಣಸ್ವಾಮಿ ಎಂಬುವವರು 9 ಎಕರೆ ಕೃಷಿ ಭೂಮಿಯನ್ನ ಬಾಡಿಗೆಗೆ ಪಡೆದು ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಕಳೆದ 2 ವರ್ಷಗಳ ಸತತ ಪರಿಶ್ರಮದಿಂದ ನಾಟಿ ಮಾಡಿದ್ದ 18 ಸಾವಿರ ಗಿಡಗಳಲ್ಲಿ ಈಗ ಮೊದಲ ಫಸಲು ಕಂಡಿದೆ. ಗೂಗಲ್, ಯೂಟ್ಯೂಬ್‍ಗಳಲ್ಲಿ ಈ ಹಣ್ಣಿನ ವಿಶೇಷತೆ ಹಾಗೂ ಬೇಡಿಕೆ ಬಗ್ಗೆ ತಿಳಿದುಕೊಂಡ ಇವರು, ಮಹಾರಾಷ್ಟ್ರದ ಪಿಲ್ವೈಘಿ, ಪಂಜಾಬ್ ಭಾಗಗಳಲ್ಲಿ ಪ್ರವಾಸ ಮಾಡಿ, ಈ ತಳಿ ತಂದಿದ್ದಾರೆ. ಭೂಮಿ ಹದಗೊಳಿಸಿ, ಹನಿ ನೀರಾವರಿ ಮೂಲಕ ಸತತ 2 ವರ್ಷಗಳ ನಿರಂತರ ಶ್ರಮದಿಂದಾಗಿ ಡ್ರ್ಯಾಗನ್ ಫ್ರೂಟ್ ಬೆಳೆದಿದ್ದಾರೆ. ಒಂದು ಕಂಬದಲ್ಲಿ 4 ಗಿಡಗಳ ಬಳ್ಳಿ ಹರಡಿಸಿದ್ದಾರೆ. ಸುಮಾರು 30 ಲಕ್ಷಕ್ಕೂ ಹೆಚ್ಚಿನ ಹಣ ಖರ್ಚು ಮಾಡಿ, ಉತ್ತಮ ಫಸಲು ಪಡೆದಿದ್ದಾರೆ. ಇದೀಗ ಮೆಟ್ರೋ, ರಿಲಯನ್ಸ್‍ನಂತಹ ಕಂಪನಿಗಳಿಗೆ ಹಣ್ಣಿನ ಮಾದರಿ ನೀಡಿದ್ದು, ಚಿಕ್ಕಬಳ್ಳಾಪುರದಲ್ಲಿಯೂ ಮಾರುಕಟ್ಟೆ ಸಿದ್ಧಪಡಿಸಿಕೊಳ್ಳುತ್ತಿದ್ದಾರೆ. ಒಂದು ಕೆಜಿಗೆ (3 ಹಣ್ಣುಗಳು) 150 ರೂ.ಗಳಂತೆ ಮಾರಾಟ ಮಾಡಲು ಸನ್ನದ್ಧಗೊಂಡಿದ್ದಾರೆ.

DRAGON FRUIT 2

ಡ್ರ್ಯಾಗನ್ ಫ್ರೂಟ್‍ನಿಂದ ಆರೋಗ್ಯ
ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ. ರಕ್ತ ಹೀನತೆ ದೂರ ಮಾಡುತ್ತದೆ. ಜೀರ್ಣ ಶಕ್ತಿ ಹೆಚ್ಚಿಸುತ್ತದೆ. ಕ್ಯಾನ್ಸರ್‍ಗೆ ರಾಮಬಾಣ, ಮಧುಮೇಹ ನಿಯಂತ್ರಣ, ಗರ್ಭಿಣಿಯರಿಗೆ ಹೆಚ್ಚಿನ ಪೌಷ್ಟಿಕಾಂಶ, ವಿಟಮಿನ್ ಸಿ ಹಾಗೂ ಎ ಅಂಶಗಳು ಹೆಚ್ಚಿದ್ದು, ಮೆದುಳು ಚುರುಕುಗೊಳಿಸುತ್ತದೆ. ಉಸಿರಾಟದ ತೊಂದರೆ ನಿವಾರಣೆ, ಮೂಳೆ, ಹಲ್ಲುಗಳನ್ನು ಬಲಿಷ್ಠಗೊಳಿಸುತ್ತದೆ. ಕಣ್ಣಿನ ದೃಷ್ಟಿ ಹೆಚ್ಚಿಸುತ್ತದೆ, ಹೃದಯ ಮತ್ತು ರಕ್ತನಾಳಗಳ ಕೊಲೆಸ್ಟ್ರಾಲ್ ಕಡಿಮೆ ಮಾಡುತ್ತದೆ. ಹೃದಯಾಘಾತ ಪ್ರಮಾಣ ಕುಗ್ಗಿಸುತ್ತದೆ. ಚರ್ಮದ ಕಾಂತಿಯನ್ನು ಹೆಚ್ಚಿಸುವುದಲ್ಲದೇ, ಬಿಳಿಯ ರಕ್ತಕಣಗಳನ್ನು ಹೆಚ್ಚಿಸುವ ಈ ಹಣ್ಣು, ಡೆಂಘೀ ಜ್ವರಕ್ಕೆ ಸಿದ್ಧ ಔಷಧವಂತೆ.

DRAGON FRUIT4

ಡ್ರ್ಯಾಗನ್ ಫ್ರೂಟ್ ಇತಿಹಾಸ
ಈ ಹಣ್ಣನ್ನು ಕನ್ನಡದಲ್ಲಿ ಪಿಟಾಹಾಯ ಹಣ್ಣು ಎಂದು ಕರೆಲಾಗುತ್ತದೆ. ಇದು ಮಧ್ಯ ಅಮೆರಿಕಾ, ದಕ್ಷಿಣ ಅಮೆರಿಕಾ ಮತ್ತು ಏಷ್ಯಾದ ಹಣ್ಣು. ವಿಶೇಷವಾಗಿ ಏಷ್ಯನ್ ಮೂಲದ ಜನರಿಗೆ ಈ ಹಣ್ಣು ಪ್ರಾಣ. ಸಿಹಿ ರುಚಿ ಹೊಂದಿದೆ. ತೀಕ್ಷ್ಣವಾದ ಆಕಾರ ಮತ್ತು ಬಣ್ಣವನ್ನು ಹೊಂದಿರುತ್ತದೆ. ಕೀವಿ ಮತ್ತು ಸೇಬಿನ ನಡುವಿನ ವಿನ್ಯಾಸವನ್ನು ಹೊಂದಿದೆ. ಟೇಸ್ಟಿ ಮತ್ತು ರಿಫ್ರೆಶ್ ಆಗಿರುವುದರ ಜತೆಗೆ ಇದು ಹಲವಾರು ಪೌಷ್ಟಿಕಾಂಶದ ಪದಾರ್ಥಗಳೊಂದಿಗೆ ಬಹಳಷ್ಟು ನೀರು ಮತ್ತು ಇತರ ಪ್ರಮುಖ ಖನಿಜಗಳನ್ನು ಒಳಗೊಂಡಿದೆ. ಡ್ರಾಗನ್ ರುಚಿಕರವಾದ ಹಣ್ಣಾಗಿದೆ. ಇದು ಸಾಮಾನ್ಯವಾಗಿ ಉಷ್ಣ ವಲಯದ ಸೂಪರ್ ಫುಡ್ ಎಂದು ಪರಿಗಣಿಸಲ್ಪಡುತ್ತದೆ. ಆದರೆ ನಿಜವಾದ ಡ್ರ್ಯಾಗನ್ ಹಣ್ಣು ಕ್ಯಾಕ್ಟಸ್ ಜಾತಿ ಹೈಲೋಕೇರಿಯಸ್ ಹಣ್ಣು. ಇದು ಮೆಕ್ಸಿಕೋ, ದಕ್ಷಿಣ ಅಮೆರಿಕಾ ಮತ್ತು ಮಧ್ಯ ಅಮೆರಿಕಾದಲ್ಲಿ ತನ್ನ ಮೂಲವನ್ನು ಹೊಂದಿದೆ. ಆದರೆ ನ್ಯೂ ವರ್ಲ್ಡ್ ವಸಾಹತುಗಾರರು ಬಹುಶಃ ಆಗ್ನೇಯ ಏಷ್ಯಾದ ರಾಷ್ಟ್ರಗಳಾದ ಕಾಂಬೋಡಿಯಾ, ಥೈಲ್ಯಾಂಡ್, ಥೈವಾನ್, ವಿಯೆಟ್ನಾಮ್ ಮತ್ತು ಫಿಲಿಪೈನ್ಸ್‍ಗೆ ತಂದರು. ಅಲ್ಲಿ ಇದು ಪಥ್ಯದ ಆಹಾರ ಸೇವನೆಯ ಪ್ರಮುಖ ಭಾಗವಾಗಿ ಉಳಿದಿದೆ. ಡ್ರ್ಯಾಗನ್ ಹಣ್ಣುಗಳು ಮೂಲತಃ ದಕ್ಷಿಣ ಅಮೆರಿಕದಿಂದ ಬಂದಿವೆ.

Share This Article
Leave a Comment

Leave a Reply

Your email address will not be published. Required fields are marked *