ಶಿರಾಡಿಘಾಟ್ ರಸ್ತೆ ಕಾಮಗಾರಿ ಮುಗಿಯುವ ಹಂತಕ್ಕೆ ಬಂದ್ರೂ ಸಂಚಾರ ಮುಕ್ತ ಅನುಮಾನ!

Public TV
1 Min Read
shiradi ghat

ಹಾಸನ: ಕರಾವಳಿ ಭಾಗಕ್ಕೆ ಸಂಪರ್ಕ ಕಲ್ಪಿಸುವ ಶಿರಾಡಿಘಾಟ್‍ನ 2ನೇ ಹಂತದ ಕಾಂಕ್ರೀಟ್ ರಸ್ತೆ ಕಾಮಗಾರಿ ಬಹುತೇಕ ಮುಗಿಯುವ ಹಂತಕ್ಕೆ ಬಂದಿದ್ದರೂ ನಿಗದಿತ ಸಮಯಕ್ಕೆ ಸಂಚಾರ ಮುಕ್ತವಾಗುವುದು ಅನುಮಾನವಾಗಿದೆ.

ಕಾಮಗಾರಿಗೆ ಮಳೆ ಭೀತಿ ಎದುರಾಗಿದ್ದು, ಜೂನ್ 1ರಿಂದ ವಾಹನ ಸಂಚಾರಕ್ಕೆ ಅವಕಾಶ ನೀಡಬೇಕಿತ್ತು. ಆದ್ರೆ 26 ಕಿಲೋಮೀಟರ್ ಕಾಮಗಾರಿ ಬಾಕಿಯಿದ್ದು, ಜೂನ್ ಕೊನೆವರೆಗೂ ಸಂಚಾರ ಮುಕ್ತವಾಗುವುದಿಲ್ಲ. ಕಾಮಗಾರಿಯಲ್ಲಿ ಜಿಯೋ ಟೆಕ್ಸ್ ಟೈಲ್ ತಂತ್ರಜ್ಞಾನ ಅಳವಡಿಸಲಾಗಿದ್ದು, 20 ವರ್ಷಗಳವರೆಗೆ ರಸ್ತೆ ಹಾಳಾಗುವುದಿಲ್ಲ ಎನ್ನಲಾಗಿದೆ.

shiradi 8 oct 2016 1

2ನೇ ಹಂತದ ಕಾಂಕ್ರೀಟ್ ಕಾಮಗಾರಿ ಪೂರ್ಣಕ್ಕೆ ಮಳೆಯ ಅಡ್ಡಿ ಎದುರಾಗಿದೆ. ಕಳೆದ ಜನವರಿ 20ರಿಂದ ಈ ಮಾರ್ಗದ ಸಂಚಾರ ಬಂದ್ ಮಾಡಿ, 74 ಕೋಟಿ ರೂ. ವೆಚ್ಚದ ಕಾಮಗಾರಿ ಆರಂಭಿಸಲಾಗಿತ್ತು. ಒಟ್ಟು 12.38 ಕಿಮೀ ಉದ್ದದ ಕಾಮಗಾರಿಯಲ್ಲಿ ಈಗಾಗಲೇ 11.2 ಕಿಮೀ ಉದ್ದದ ಕೆಲಸ ಮುಗಿದಿದೆ. ಉಳಿದ ಕಾಮಗಾರಿ ಪೂರ್ಣಕ್ಕೆ ಮಳೆ ಅಡ್ಡಿಯಾಗಿದೆ. ಬಾಕಿ ಕಾಂಕ್ರೀಟ್ ಕಾಮಗಾರಿ ಮುಗಿಯಲು ಕನಿಷ್ಠ 1 ವಾರ ಕಾಲಾವಕಾಶ ಬೇಕಿದೆ. ಅದಾದ ನಂತರ ಕ್ಯೂರಿಂಗ್ ಆಗಲು 15 ದಿನ ಬೇಕಿದೆ. ಆದರೆ ಇಷ್ಟು ಕೆಲಸ ಮುಗಿಸಲು ವರುಣದೇವ ಬಿಡುವು ನೀಡದ ಕಾರಣ, ಜೂನ್ 1 ರಿಂದ ಶಿರಾಡಿಘಾಟ್ ರಸ್ತೆ ಸಂಚಾರಕ್ಕೆ ಮುಕ್ತವಾಗುವುದು ಅನುಮಾನವಾಗಿದ್ದು, ಜೂನ್ ಅಂತ್ಯದವರೆಗೂ ಕಾಯಲೇಬೇಕಿದೆ.

3BGSHIRADI

ಕಳೆದ 3 ವರ್ಷಗಳ ಹಿಂದೊಮ್ಮೆ ಮತ್ತು ಕಳೆದ ಜನವರಿಯಿಂದ ರಸ್ತೆ ಮುಚ್ಚಿರುವುದರಿಂದ ವ್ಯಾಪಾರ ವಹಿವಾಟು ಇಲ್ಲದೇ ರಸ್ತೆ ಬದಿ ವ್ಯಾಪಾರಿಗಳು ಸಾಕಷ್ಟು ತೊಂದರೆ ಅನುಭವಿಸಿದ್ದಾರೆ. ಹಾಗೆಯೇ ಧರ್ಮಸ್ಥಳ, ಸುಬ್ರಹಣ್ಯ ಮೊದಲಾದ ಕಡೆಗೆ ಹೋಗುವವರು ಸುತ್ತಿ ಬಳಸಿ ಸಾಕಷ್ಟು ಹೈರಾಣಾಗಿದ್ದು, ಆದಷ್ಟು ಬೇಗ ಕೆಲಸ ಮುಗಿಯಲಿ ಎಂಬ ನಿರೀಕ್ಷೆಯಲ್ಲಿದ್ದಾರೆ.

ಈಗಾಗಲೇ 13.62 ಕಿಮೀ ಉದ್ದದ ಮೊದಲ ಹಂತದ ಕಾಮಗಾರಿ 2015ರಲ್ಲೇ ಮುಗಿದಿದ್ದು, 2ನೇ ಹಂತದ ಕಾಮಗಾರಿಯೂ ಆದಷ್ಟು ಶೀಘ್ರ ಪೂರ್ಣಗೊಂಡರೆ ಒಳಿತು. ಯಾಕಂದ್ರೆ ಈ ಮೊದಲು ಜೋರು ಮಳೆ ಬಂದಾಗ ರಸ್ತೆ ಗುಂಡಿಬಿದ್ದು, ಧರ್ಮಸ್ಥಳ-ಮಂಗಳೂರು ಕಡೆಗೆ ಹೋಗುವ ಮಂದಿ ಅನುಭವಿಸುತ್ತಿದ್ದ ಸಂಚಾರ ಕಿರಿಕಿರಿ ತಪ್ಪಲಿದೆ ಅನ್ನೋದು ಪ್ರಯಾಣಿಕರ ಆಶಾಭಾವವಾಗಿದೆ.

Shiradi road 2

Share This Article
Leave a Comment

Leave a Reply

Your email address will not be published. Required fields are marked *