8 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕಿ ಕೊನೆಗೂ ಅಮ್ಮನ ಮಡಿಲು ಸೇರಿದ್ಳು!

Public TV
2 Min Read
HSN MAGALU

ಹಾಸನ: ರಾಜ್ಯಾದ್ಯಂತ ಮಕ್ಕಳ ಕಳ್ಳರ ವದಂತಿ ಭಯ ಹುಟ್ಟಿಸಿರುವುದು ಒಂದೆಡೆಯಾದ್ರೆ, 8 ವರ್ಷಗಳ ಹಿಂದೆ ಕಾಣೆಯಾಗಿದ್ದ ಬಾಲಕಿಯೊಬ್ಬಳು, ಮರಳಿ ಪೋಷಕರ ಮಡಿಲಿಗೆ ಸೇರಿರುವ ಅಪರೂಪದ ಘಟನೆ ಜಿಲ್ಲೆಯ ಬೇಲೂರಿನಲ್ಲಿ ನಡೆದಿದೆ.

15 ವರ್ಷದ ರೇಣುಕಾ ಅಲಿಯಾಸ್ ರೇಖಾ ಎಲ್ಲೋ ಇದ್ದು ಈಗ ಹೆತ್ತವರ ಜೊತೆ ಸೇರಿಕೊಂಡ ಅದೃಷ್ಟವಂತೆ. ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಹಾಗೂ ಕಾಣೆಯಾದ ಮಕ್ಕಳ ಬ್ಯೂರೋದ ಪರಿಶ್ರಮದಿಂದಾಗಿ ತಮ್ಮ ಮಗಳ ಪುನರಾಗಮನದಿಂದ ಚಿಂತೆಯಲ್ಲಿ ಮುಳುಗಿದ್ದ ಬಡ ಕುಟುಂಬದಲ್ಲಿ ಸಂತಸ ಮೂಡಿದೆ.

ಘಟನೆ ವಿವರ: ಬೇಲೂರು ತಾಲೂಕು ದೇವೀಹಳ್ಳಿ ಗ್ರಾಮದ ಹನುಮಂತಬೋವಿ ಪುತ್ರಿ ರೇಖಾ 4 ನೇ ತರಗತಿ ಓದುತ್ತಿದ್ದಾಗ ಶಾಲೆಗೆ ಹೋದವಳು ಮನೆಗೆ ಬಾರದೇ ದಿಢೀರ್ ನಾಪತ್ತೆಯಾಗಿದ್ದಳು. ಮೊದಲೇ ಕೂಲಿ ಮಾಡಿ ಬದುಕುತ್ತಿರುವ ಪೋಷಕರು ಕರುಳ ಕುಡಿಗಾಗಿ ಎಲ್ಲಾ ಕಡೆ ಹುಡುಕಾಡಿದ್ದರು. ಬೇಲೂರು, ಹಳೇಬೀಡು, ಹಾಸನ ಹಾಗೂ ಸಂಬಂಧಿಕರ ಮನೆಯಲ್ಲೂ ಶೋಧಕಾರ್ಯ ನಡೆಸಿದ್ದರು. ಆದರೂ ಮಗಳು ಪತ್ತೆಯಾಗದೇ ಇದ್ದಾಗ ಹಳೇಬೀಡು ಪೊಲೀಸ್ ಠಾಣೆ ಹಾಗೂ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಗೆ ದೂರು ನೀಡಿ ಮಗಳು ಎಂದು ಬರುವಳೋ ಎಂದು ಕಾದು ಕುಳಿತಿದ್ದರು.

HSN

ದೂರು ಸ್ವೀಕರಿಸಿದ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ, ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ಸಮಗ್ರ ಮಕ್ಕಳ ರಕ್ಷಣಾ ಘಟಕದಲ್ಲಿ ಸ್ಥಾಪಿಸಲಾಗಿರುವ ಕಾಣೆಯಾದ ಮಕ್ಕಳ ಬ್ಯೂರೋಗೆ ಬಾಲಕಿಯ ಫೋಟೋ ಹಾಗೂ ಸ್ವವಿವರ ರವಾನೆ ಮಾಡಿದೇವು. ಫೋಟೋ ಪರಿಶೀಲನೆ ಹಾಗೂ ತಪಾಸಣೆ ವೇಳೆ, ರೇಖಾ ಮಂಡ್ಯ ಜಿಲ್ಲೆಯ ಬಾಲಕಿಯರ ಬಾಲಮಂದಿರದಲ್ಲಿ ಇದ್ದಾಳೆ ಎಂಬುದು ಪತ್ತೆಯಾಯಿತು. ಕೂಡಲೇ ಕಾರ್ಯಪ್ರವೃತ್ತರಾದ ಅಧಿಕಾರಿಗಳು ಮಂಡ್ಯ ಬಾಲಕಿಯರ ಬಾಲಮಂದಿರ ಸಂಪರ್ಕ ಮಾಡಿದಾಗ ರೇಖಾಗೆ 14 ವರ್ಷ ತುಂಬಿರುವುದರಿಂದ ಆಕೆಯನ್ನು ಮೈಸೂರಿನ ಬಾಲಕಿಯರ ಬಾಲಮಂದಿರಕ್ಕೆ ಕಳಿಸಲಾಗಿದೆ ಎಂಬ ಮಾಹಿತಿ ಲಭ್ಯವಾಯಿತು. ಇದಾದ ಬಳಿಕ ರೇಖಾಳನ್ನು ಮೈಸೂರಿನಿಂದ ಕರೆತಂದು ಇದೀಗ ಎಲ್ಲರ ಸಮ್ಮುಖದಲ್ಲಿ ಪೋಷಕರ ವಶಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ಕೋಮಲಾ ತಿಳಿಸಿದ್ದಾರೆ.

HSN

ನಾಲ್ಕನೇ ತರಗತಿ ಓದುವಾಗ ಕಾಣೆಯಾಗಿದ್ದ ರೇಖಾ, ಇದೀಗ ಫಸ್ಟ್ ಕ್ಲಾಸ್ ನಲ್ಲಿ ಎಸ್‍ಎಸ್‍ಎಲ್‍ಸಿ ಪಾಸು ಮಾಡಿದ್ದಾಳೆ. ಪ್ರತಿಭಾವಂತ ಮಗಳು 8 ವರ್ಷಗಳ ನಂತರ ಮರಳಿ ಮನೆಗೆ ಬಂದಿರುವುದು ಬಡ ಪೋಷಕರು ಹಾಗೂ ಇಡೀ ಕುಟುಂಬದಲ್ಲಿ ಸಂತಸಕ್ಕೆ ಕಾರಣವಾಗಿದೆ. ಇಷ್ಟು ದಿನ ಕುಟುಂಬದವರ ಪ್ರೀತಿ ವಾತ್ಸಲ್ಯದಿಂದ ವಂಚಿತಳಾಗಿದ್ದ ಬಾಲಕಿ, ಕಾಣೆಯಾದ ಮಕ್ಕಳ ಬ್ಯೂರೋ ಹಾಸನ ಜಿಲ್ಲಾ ಘಟಕದ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಪರಿಶ್ರಮದಿಂದ ಪೋಷಕರ ಮಡಿಲು ಸೇರಿರುವುದು ನಿಜಕ್ಕೂ ಅದೃಷ್ಟದ ಸಮಾಗಮ. ಮಗಳು ಮತ್ತೆ ಮನೆಗೆ ಬಂದಿರುವುದು ಖುಷಿಯಾಗಿದೆ. ಮುಂದೆ ಆಕೆಯನ್ನು ಚೆನ್ನಾಗಿ ನೋಡಿಕೊಳ್ಳುತ್ತೇವೆ ಅಂತ ತಂದೆ ಭರವಸೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *