ಅಸೌಖ್ಯದಲ್ಲಿದ್ರೂ ನೋವನ್ನು ಲೆಕ್ಕಿಸದೇ ಕೆಲಸ ಮಾಡ್ತಿದ್ಳು: ನಿಪಾ ವೈರಸ್‍ಗೆ ಬಲಿಯಾದ ನರ್ಸ್ ಪತಿ ಕಣ್ಣೀರು

Public TV
3 Min Read
lini husband

ಕೋಝಿಕೋಡ್: ನರ್ಸಿಂಗ್ ಎಂಬುದು ಒಂದು ಕಷ್ಟದ ಕೆಲಸ. ಹೀಗಾಗಿ ನನ್ನ ಪತ್ನಿಯ ಬಗ್ಗೆ ನನಗೆ ಹೆಮ್ಮೆಯಾಗುತ್ತದೆ ಅಂತ ಕೇರಳದಲ್ಲಿ ಇತ್ತೀಚೆಗೆ ನಿಪಾ ವೈರಸ್ ಗೆ ಬಲಿಯಾದ ಲಿನಿ ಪತಿ ಸಜೀಶ್ ಹೇಳಿದ್ದಾರೆ.

ನನ್ನ ಪತ್ನಿ ಎಷ್ಟು ನಿಯತ್ತಿನಿಂದ ಕೆಲಸ ಮಾಡುತ್ತಿದ್ದಳು ಅಂದ್ರೆ ಆಕೆಗೆ ಹುಷಾರಿಲ್ಲ ಅಂದ್ರೂ ರಜೆ ಹಾಕದೇ ಕಷ್ಟಪಟ್ಟಾದರೂ ತನ್ನ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ಮಾಡಿ ಮುಗಿಸುತ್ತಿದ್ದಳು ಅಂತ 36 ವರ್ಷದ ಸಜೀಶ್ ತಿಳಿಸಿದ್ದಾರೆ.

ಏನಿದು ಪ್ರಕರಣ?:
ಬಾವಲಿಗಳ ಮೂಲಕ ಹರಡುವ ನಿಪಾ ವೈರಸ್ ಗೆ ಕೇರಳದ ಲಿನಿ ಬಲಿಯಾಗಿದ್ದರು. ಆಸ್ಪತ್ರೆಯೊಂದರಲ್ಲಿ ನರ್ಸ್ ಆಗಿ ಕಾರ್ಯನಿರ್ವಹಿಸುತ್ತಿದ್ದ 31 ವರ್ಷ ಲಿನಿ, ತನ್ನ ಸಾವು ಖಚಿತವಾದ ಹಿನ್ನೆಲೆಯಲ್ಲಿ ಪತಿಗೆ ಭಾವನಾತ್ಮಕ ಪತ್ರ ಬರೆದಿದ್ದರು. ಈ ವಿಚಾರ ತಿಳಿದು ಕೂಡಲೇ ಬಹರೈನ್ ನಲ್ಲಿ ಉದ್ಯೋಗದಲ್ಲಿದ್ದ ಪತಿ ಸಜೀಶ್ ಊರಿಗೆ ವಾಪಸ್ಸಾಗಿದ್ದರು. ಅಲ್ಲದೇ ಕೇವಲ 2 ನಿಮಿಷವಷ್ಟೇ ಪತ್ನಿ ಮುಖ ನೋಡಿದ್ದರು. ಭಾನುವಾರ ಸಂಜೆ ಲಿನಿ ಮೃತಪಟ್ಟಿದ್ದರು.

kerala nurse lini

`ಭಾನುವಾರ ಬೆಳಗ್ಗೆ ನಾನು ಪತ್ನಿಯನ್ನು ನೋಡಲೆಂದು ಆಸ್ಪತ್ರೆಗೆ ತೆರಳಿದ್ದೆ. ಆದ್ರೆ ಈ ವೇಳೆ ಅವಳ ಮುಖಕ್ಕೆ ಆಕ್ಸಿಜನ್ ಮಾಸ್ಕ್ ಹಾಕಲಾಗಿತ್ತು. ಹೀಗಾಗಿ ನನಗೆ ಅವಳೊಂದಿಗೆ ಮಾತನಾಡಲು ಅವಕಾಶ ಸಿಕ್ಕಿಲ್ಲ. ಕೇವಲ 2 ನಿಮಿಷವಷ್ಟೇ ಅವಳನ್ನು ನೋಡಿ, ಅವಳ ಮೇಲೆ ನನ್ನ ಕೈಯಿಟ್ಟೆ. ಆಗ ಅವಳಿಗೆ ಪ್ರಜ್ಞೆಯಿತ್ತು ‘ಅಂತ ಅವರು ವಿವರಿಸಿದ್ರು.

ಬಿಡುವಿಲ್ಲದೇ ತಾನು ಅಸೌಖ್ಯದಿಂದ ಇದ್ದರೂ ಲೆಕ್ಕಿಸದೇ ಕೆಲಸ ಮಾಡುತ್ತಿದ್ದಳು. ಹೀಗಾಗಿ ನನಗೆ ಅವಳ ಬಗ್ಗೆ ಗೌರವ ಹಾಗೂ ಹೆಮ್ಮೆಯಿದೆ ಎಂದು ನೆನಪು ಮಾಡಿಕೊಂಡು ದುಃಖಿತರಾದ್ರು. ಇದನ್ನೂ ಓದಿ: ನಾನು ಸಾಯ್ತೀನಿ, ಮಕ್ಕಳನ್ನು ಚೆನ್ನಾಗಿ ನೋಡ್ಕೊಳ್ಳಿ- ಪತಿಗೆ ನಿಪಾ ವೈರಸ್‍ಗೆ ಬಲಿಯಾದ ಕೇರಳ ನರ್ಸ್ ಪತ್ರ

ಸಾವಿಗೂ ಮೊದಲು ಅಂದ್ರೆ ಬುಧವಾರ ಫೋನ್ ಕರೆಯಲ್ಲಿ ಮಾತನಾಡಿದಾಗ, ನನಗೆ ಜ್ವರ ಬರೋ ಹಾಗೆ ಇದೆ ಅಂತ ಹೇಳಿದ್ದಳು. ಆಗ ನಾನು ರಜೆ ಮಾಡಿ ರೆಸ್ಟ್ ಮಾಡು ಅಂತ ಹೇಳಿದ್ದೆ. ಆದ್ರೆ ಆಸ್ಪತ್ರೆಯಲ್ಲಿ ತುಂಬಾ ರೋಗಿಗಳಿದ್ದಾರೆ. ಹೀಗಾಗಿ ರಜೆ ತಗೊಳಲ್ಲ ಅಂತ ಹೇಳಿದಳು. ಅಲ್ಲದೇ ಕೆಲಸಕ್ಕೆಂದು ಆಸ್ಪತ್ರೆಗೆ ತೆರಳಿದ್ದಳು ಅಂದ್ರು. ಇದನ್ನೂ ಓದಿ: ನಿಪಾ ವೈರಸ್ ಗೆ ಬಲಿಯಾದ ನರ್ಸ್ ಕುಟುಂಬಕ್ಕೆ 20 ಲಕ್ಷ ರೂ.: ಪತಿಗೆ ಸರ್ಕಾರಿ ಉದ್ಯೋಗ ಘೋಷಿಸಿದ ಕೇರಳ

l4 1526978839 1526994945

ಡೆತ್ ನೋಟ್:
ತನ್ನ ಸಾವು ಖಚಿತವಾದ ಲಿನಿ ತನ್ನ ಪತಿ ಸಜೀಶ್ ಗೆ ಪತ್ರವೊಂದನ್ನು ಬರೆದಿದ್ದಾರೆ. ಅದರಲ್ಲಿ ಇಬ್ಬರು ಮಕ್ಕಳನ್ನು ಚೆನ್ನಾಗಿ ನೋಡಿಕೊಳ್ಳುವಂತೆ ತಿಳಿಸಿದ್ದರು. ಈ ಪತ್ರ ಕೂಡಲೇ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಅಲ್ಲದೇ ಸಜೀಶ್ ಅವರಿಗೂ ಈ ಪತ್ರ ತಲುಪಿತ್ತು. ಲಿನಿ ಅವರು ಸರ್ಕಾರಿ ಕೆಲಸಕ್ಕಾಗಿ ಪ್ರಯತ್ನಿಸುತ್ತಿದ್ದರು. ಅಲ್ಲದೇ ಇತ್ತ 5 ಹಾಗೂ 2 ವರ್ಷದ ಮಕ್ಕಳ ಜೊತೆಯೂ ಕಾಲ ಕಳೆಯುತ್ತಿದ್ದರು. ಸದ್ಯ ಈ ಇಬ್ಬರೂ ಮಕ್ಕಳು ಇನ್ನೂ ತಾಯಿಯ ಬರುವಿಕೆಗೆ ಕಾದು ಕುಳಿತಿದ್ದು, ಮಕ್ಕಳ ಮುಖವನ್ನು ನೋಡಿದಾಗ ಕರುಳು ಚುರುಕ್ ಅನ್ನುತ್ತದೆ. ಇದನ್ನೂ ಓದಿ: ಬಾವಲಿ ಜ್ವರಕ್ಕೆ ಕರ್ನಾಟಕದಲ್ಲೂ ಹೈಅಲರ್ಟ್ – ಈ ಮಾಹಿತಿ ನಿಮಗೆ ಗೊತ್ತಿರಲಿ..!

ಇದರಲ್ಲಿ ದೊಡ್ಡ ಮಗ ತನ್ನ ತಾಯಿಗೆ ಕರೆ ಮಾಡು ಮಾತಾಡಬೇಕು ಅಂತ ಹಠ ಹಿಡಿಯುತ್ತಿದ್ದರೆ, ಸಣ್ಣವ ಇನ್ನೂ ಚಿಕ್ಕವನಾಗಿದ್ದಿದ್ದರಿಂದ ಮಾತನಾಡುತ್ತಿಲ್ಲ. ಆದ್ರೆ ಈ ಇಬ್ಬರೂ ಅಮ್ಮ ಹೊರಗಡೆ ಹೋಗಿದ್ದಾಳೆ, ಇನ್ನೇನೋ ಬರುತ್ತಾಳೆ ಅನ್ನೋ ನಿರೀಕ್ಷೆಯಲ್ಲಿದ್ದಾರೆ ಅಂತ ಲಿನಿ ಸೋದರ ಸಂಬಂಧಿಯೊಬ್ಬರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದಾರೆ.

ಸದ್ಯ ಲಿನಿ ಪತಿಗೆ ಸರ್ಕಾರಿ ಕೆಲಸ ಹಾಗೂ 20 ಲಕ್ಷ ಪರಿಹಾರವನ್ನು ಕೊಡುವುದಾಗಿ ಕೇರಳ ಸರ್ಕಾರ ಘೋಷಿಸಿದೆ. ಹೀಗಾಗಿ ಸಜೀಶ್ ಸರ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *