ಬೆಂಗಳೂರು: ಸದನದಲ್ಲಿ ಬಿಎಸ್ ಯಡಿಯೂರಪ್ಪ ರಾಜೀನಾಮೆ ನೀಡಿ ಹೊರನಡೆಯುತ್ತಿದ್ದಂತೆ ಕಾಂಗ್ರೆಸ್-ಜೆಡಿಎಸ್ ಮುಖಂಡರು ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ.
ಕೆಪಿಸಿಸಿ ಕಚೇರಿ ಬಳಿ ರಾಹಲ್ ಗಾಂಧಿ, ಸೋನಿಯಾ ಗಾಂಧಿ, ಪರಮೇಶ್ವರ್, ಸಿದ್ದರಾಮಯ್ಯ, ಡಿ.ಕೆ. ಶಿವಕುಮಾರ್ ಭಾವಚಿತ್ರಕ್ಕೆ ಹಾಲಿನ ಅಭಿಷೇಕ ಮಾಡಿದ್ದಾರೆ. ಡಿಕೆಶಿ ಪರ ಕೈ ಕಾರ್ಯಕರ್ತರು ಜೈಕಾರ ಹಾಕಿದ್ದಾರೆ. ಈ ವೇಳೆ ಮಹಿಳೆಯರು ಕುಣಿದು ಕುಪ್ಪಳಿಸಿದ್ದಾರೆ.
ಇದೇ ವೇಳೆ ರಾಜ್ಯಪಾಲರ ವಿರುದ್ಧ ಕುಮಾರಸ್ವಾಮಿ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸಿದ್ದು, ರಾಜ್ಯಪಾಲರು ತೊಲಗಲಿ ಎಂದು ಘೋಷಣೆ ಕೂಗಿದ್ದಾರೆ. ದೆಹಲಿಯಲ್ಲೂ ಎಐಸಿಸಿ ಕಚೇರಿಯೆದುರು ಡೋಲು ಬಾರಿಸಿ ಸಿಹಿ ಹಂಚುವ ಮೂಲಕ ಕಾರ್ಯಕರ್ತರು ಖುಷಿ ಪಟ್ಟಿದ್ದಾರೆ.
ಚಿತ್ರದುರ್ಗ, ಆನೇಕಲ್, ಹಾವೇರಿ, ಹಾಸನ, ಮಂಡ್ಯ, ಹುಬ್ಬಳ್ಳಿ, ರಾಮನಗರ, ಕಾರವಾರ, ಮಂಗಳೂರು, ಯಾದಗಿರಿ ಹೀಗೆ ಎಲ್ಲಾ ಕಡೆ ಕಾಂಗ್ರೆಸ್, ಜೆಡಿಎಸ್ ಕಾರ್ಯಕರ್ತರು ಸಿಹಿ ಹಂಚಿ, ಬಣ್ಣ ಎರಚಿಕೊಂಡು ವಿಜಯೋತ್ಸವ ಆಚರಿಸಿದ್ದಾರೆ.