ಮೈಸೂರು: ಆ ಮೋದಿ ಮುಧೋಳ ನಾಯಿಯಿಂದ ಕಾಂಗ್ರೆಸ್ ನಿಯತ್ತು ಕಲಿಬೇಕು ಅಂತಾನೆ, ಅವನಿಗೇ ನಿಯತ್ತಿಲ್ಲ. ಬೆಳೆಸಿದ ಅಡ್ವಾಣಿಯನ್ನೇ ಮೂಲೆ ಗುಂಪು ಮಾಡಿದ್ದಾನೆ ಎಂದು ಪ್ರಧಾನಿ ಮೋದಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಮೈಸೂರಿನ ಚಾಮರಾಜ ಕ್ಷೇತ್ರದ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಕಾಂಗ್ರೆಸ್ ಪಕ್ಷದ ಅಲೆಯನ್ನ ನರೇಂದ್ರ ಮೋದಿಯಾಗಲಿ, ಅಮಿತ್ ಶಾ ಆಗಲಿ ಬದಲಾವಣೆ ಮಾಡೋಕಾಗೋಲ್ಲ. ಮೋದಿ ಕರ್ನಾಟಕಕ್ಕೆ ಕೊಡುಗೆ ಏನು ನೀಡಿದ್ದಾರೆ. ಮನ್ ಕಿ ಬಾತ್ ನೀಡಿದ್ದಾರೆ. ಅದರಿಂದ ಹೊಟ್ಟೆ ತುಂಬುತ್ತಾ ಎಂದು ಪ್ರಶ್ನಿಸಿ ಕಿಡಿಕಾರಿದ್ದಾರೆ.
ಬಡವರಿಗೆ ಹೊಟ್ಟೆ ತುಂಬಿಸುವಂತಹ, ರೈತರ ಸಮಸ್ಯೆಗಳನ್ನು ಮತ್ತು ನಿರುದ್ಯೋಗಿಗಳ ಕಷ್ಟವನ್ನು ಪರಿಹರಿಸುವಂತಹ ಕಾರ್ಯಕ್ರಮವನ್ನು ಮಾಡಬೇಕು. ನನಗೆ 56 ಇಂಚಿನ ಎದೆ ಎಂದು ಹೇಳುತ್ತಾರೆ. ಅವರಿಗೆ 56 ಇಂಚಿನ ಎದೆ. ಆದರೆ ಒಳಗೆ ಬಡವರ ಪರವಾದ ಹೃದಯ, ಅವರಿಗಾಗಿ ಸ್ಪಂದಿಸುವ ಮನಸ್ಸು ಇದಿಯಾ ಎಂಬುದು ಬಹಳ ಮುಖ್ಯ ಎಂದು ಹೇಳಿ ತರಾಟಗೆ ತೆಗೆದುಕೊಂಡರು.
ಬಾಡಿ ಬಿಲ್ಡರ್ ಗಳಿಗೂ ದೊಡ್ಡ ದೊಡ್ಡ ಎದೆ ಇರುತ್ತೆ. ದೊಡ್ಡ ಪೈಲ್ವಾನ್ ಗಳಿಗೂ ಇರುತ್ತದೆ. ಏನು 56 ಇಂಚಿನ ಎದೆ ನರೇಂದ್ರ ಮೋದಿ ಒಬ್ಬರಿಗೆ ಮಾತ್ರ ಇರೋದಾ ಎಂದು ಪ್ರಶ್ನಿಸಿ ಸಮಾವೇಶದ ಭಾಷಣದಲ್ಲಿ ಸಿಎಂ ಸಿದ್ದರಾಮಯ್ಯ ಪ್ರಧಾನಿ ಮೋದಿಯ ದೇಹದ ಬಗ್ಗೆ ವ್ಯಂಗ್ಯ ಮಾಡಿದರು.
ಇದೇ ವೇಳೆ ಚಿತ್ರ ನಟ ಸುದೀಪ್ ಚಾಮುಂಡೇಶ್ವರಿ ಪ್ರಚಾರದಿಂದ ದೂರ ಉಳಿದ ವಿಚಾರವಾಗಿ ಪ್ರತಿಕ್ರಿಯಿಸಿ, ಸುದೀಪ್ ಪ್ರಚಾರಕ್ಕೆ ಬರಬೇಕಿತ್ತು ಅವರಿಗೆ ಬೇರೆ ಏನೇನೋ ಕೆಲಸ ಇದ್ದ ಕಾರಣಕ್ಕೆ ಪ್ರಚಾರಕ್ಕೆ ಬಂದಿಲ್ಲ ಎಂದು ಸ್ಪಷ್ಟನೆ ನೀಡಿದರು.