ಚೆನ್ನೈ: 46 ವರ್ಷದ ಮಹಿಳೆಯೊಬ್ಬರು ರಾತ್ರಿ ಮಲಗುವ ವೇಳೆ ಕಿವಿಯಲ್ಲಿ ಇಯರ್ ಫೋನ್ ಇಟ್ಟುಕೊಂಡು ನಿದ್ದೆಗೆ ಜಾರಿದ್ದು, ಪರಿಣಾಮ ಮಹಿಳೆ ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ಕಾತನೂರ್ ನಲ್ಲಿ ನಡೆದಿದೆ.
ಫಾತಿಮಾ(49) ಮೃತ ದುರ್ದೈವಿ. ಈಕೆಯ ಪತಿ ಅಬ್ದುಲ್ ಕಲಾಂ ಭಾನುವಾರ ಬೆಳಗ್ಗೆ ಪತ್ನಿಯನ್ನ ಎಬ್ಬಿಸಲು ಹೋಗಿದ್ದಾರೆ. ಆದರೆ ಫಾತಿಮಾ ಅವರನ್ನು ಎಬ್ಬಿಸಲು ಪ್ರಯತ್ನಿಸಿದರೂ ಅವರು ಮಿಸುಕಾಡಲಿಲ್ಲ. ಬಳಿಕ ಗಾಬರಿಗೊಂಡ ಪತಿ ಅವರನ್ನು ತಕ್ಷಣ ಸಮೀಪದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಅಷ್ಟರಲ್ಲಿ ಫಾತಿಮಾ ವಿದ್ಯುತ್ ಶಾಕ್‍ನಿಂದ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಆಸ್ಪತ್ರೆಯ ಅಧಿಕಾರಿಗಳು ಈ ಬಗ್ಗೆ ಕಾತನೂರ್ ಪೊಲೀಸರಿಗೆ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದು ಆಸ್ಪತ್ರೆಗೆ ಬಂದು ಪೊಲೀಸರು ಫಾತಿಮಾ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ರಾಯಪೆಟ್ಟಾ ಆಸ್ಪತ್ರೆಗೆ ರವಾನಿಸಿದ್ದರು.
ವೈದ್ಯರು ಫಾತಿಮಾ ವಿದ್ಯುತ್ ಶಾಕ್ ನಿಂದ ಮೃತಪಟ್ಟಿದ್ದಾರೆ ಎಂದು ದೃಢಪಡಿಸಿದ್ದಾರೆ. ಬಳಿಕ ನಾವು ಈ ಘಟನೆ ಬಗ್ಗೆ ಐಪಿಸಿ ಸೆಕ್ಷನ್ 174 (ಅಸ್ವಾಭಿಕ ಸಾವು) ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಫಾತಿಮಾ ಅವರು ಪ್ರತಿದಿನ ಮಲಗುವ ವೇಳೆ ಕಿವಿಗೆ ಇಯರ್‍ಫೋನ್ ಹಾಕಿಕೊಂಡು ಸಂಗೀತ ಕೇಳುತ್ತಾ ಮಲಗುವ ರೂಢಿ ಮಾಡಿಕೊಂಡಿದ್ದರು. ಅದೇ ರೀತಿ ಶನಿವಾರ ರಾತ್ರಿ ಕೂಡ ಇಯರ್ ಫೋನ್ ಹಾಕಿಕೊಂಡು ಮಲಗಿದ್ದಾರೆ. ಆಗ ಶಾರ್ಟ್ ಸರ್ಕ್ಯೂಟ್‍ನಿಂದ ವಿದ್ಯುತ್ ತಗುಲಿ ಮೃತಪಟ್ಟಿದ್ದಾರೆ ಅಂತ ತನಿಖೆಯಿಂದ ತಿಳಿದು ಬಂದಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.