ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಯ ಫಲಿತಾಂಶದ ಕುರಿತು ನಡೆದ ಚುನಾವಣಾ ಪೂರ್ವ ಸಮೀಕ್ಷೆಗಳಲ್ಲಿ ಅತಂತ್ರ ಸ್ಥಿತಿ ನಿರ್ಮಾಣವಾಗಲಿದೆ ಎನ್ನುವ ಫಲಿತಾಂಶದ ಹಿನ್ನೆಲೆಯಲ್ಲಿ ಅಮಿತ್ ಶಾ ಬೆಂಗಳೂರು ಮಹಾನಗರದಲ್ಲಿ ಹೆಚ್ಚಿನ ಸ್ಥಾನ ಗೆಲ್ಲಲು ಪ್ಲಾನ್ ಮಾಡಿದ್ದಾರೆ.
ನಗರಕ್ಕೆ ಬಂದಿಳಿದ ಬಳಿಕ ಫೇರ್ ಫೀಲ್ಡ್ ನ ಬಾಡಿಗೆ ಮನೆಯಲ್ಲಿ ಅಮಿತ್ ಶಾ ಪ್ರತ್ಯೇಕವಾಗಿ ಬೆಂಗಳೂರು ನಾಯಕರನ್ನು ಕರೆಸಿ ಚರ್ಚೆ ನಡೆಸಿದ್ದಾರೆ. ಈ ಸಭೆಯಲ್ಲಿ 28 ಕ್ಷೇತ್ರಗಳಲ್ಲಿ ಕನಿಷ್ಟ 20 ಸ್ಥಾನ ಗೆಲುವು ಪಡೆಯಲು ಶಾ ತಂತ್ರ ಹೂಡಿದ್ದಾರೆ ಎನ್ನುವ ವಿಚಾರ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.
ಪ್ರಧಾನಿ ಮೋದಿ ಬೆಂಗಳೂರಿನಲ್ಲಿ ಎರಡು ಬೃಹತ್ ಬೃಹತ್ ಸಮಾವೇಶದಲ್ಲಿ ಭಾಗವಹಿಸುತ್ತಿರುವ ಹಿನ್ನೆಲೆಯಲ್ಲಿ “ಸಮಾವೇಶ 2, ಸೀಟು 20” ಘೋಷ ವಾಕ್ಯದೊಂದಿಗೆ ಅಖಾಡಕ್ಕೆ ಇಳಿಯುವಂತೆ ಸೂಚಿಸಿದ್ದಾರೆ.
ಮೇ 1 ರಂದು ರಾಜ್ಯಕ್ಕೆ ಪ್ರಧಾನಿ ಮೋದಿ ಆಗಮಿಸಲಿದ್ದು, 5 ದಿನ ವಿವಿಧ ಜಿಲ್ಲೆಗಳಲ್ಲಿ ನಡೆಯುವ 15 ಕಾರ್ಯಕ್ರಮಗಳಲ್ಲಿ ಪ್ರಧಾನಿ ಮೋದಿ ಭಾಗಿಯಾಗಲಿದ್ದಾರೆ. ವಿಶೇಷ ಏನೆಂದರೆ ಬೆಂಗಳೂರಿನಲ್ಲಿ ಎರಡು ಬೃಹತ್ ರ್‍ಯಾಲಿಗಳಲ್ಲಿ ಮೋದಿ ಭಾಗಿಯಾಗಲಿದ್ದಾರೆ. ಮೇ 2 ಮತ್ತು ಮೇ 8 ರಂದು ಮೋದಿ ಬೆಂಗಳೂರಿನ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
2014ರ ಲೋಕಸಭಾ ಚುನಾವಣೆಯ ವೇಳೆ ಬೆಂಗಳೂರು ಗ್ರಾಮೀಣ ಹೊರತು ಪಡಿಸಿ, ಬೆಂಗಳೂರು ದಕ್ಷಿಣ, ಬೆಂಗಳೂರು ಸೆಂಟ್ರಲ್, ಬೆಂಗಳೂರು ಉತ್ತರವನ್ನು ಬಿಜೆಪಿ ಗೆದ್ದುಕೊಂಡಿತ್ತು. ಹೀಗಾಗಿ ಬೆಂಗಳೂರಿನಲ್ಲಿ ಅತಿ ಹೆಚ್ಚು ಸೀಟ್ ಗೆಲ್ಲುವಂತೆ ಶಾ ನಾಯಕರಿಗೆ ಸೂಚಿಸಿದ್ದಾರೆ.
ಬೇರೆ ರಾಜ್ಯಗಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲೂ ಗ್ರಾಮೀಣ ಭಾಗಕ್ಕೆ ಹೋಲಿಸಿದರೆ ನಗರದಲ್ಲಿ ಬಿಜೆಪಿ ಹೆಚ್ಚಿನ ಸ್ಥಾನವನ್ನು ಗೆದ್ದುಕೊಂಡಿತ್ತು. ಈ ಕಾರಣಕ್ಕೆ ಬಿಜೆಪಿ ಈಗ ಬೆಂಗಳೂರಿನಲ್ಲಿ ಸಮಾವೇಶ 2, ಸೀಟು 20 ತಂತ್ರವನ್ನು ಅನುಸರಿಸಲು ಮುಂದಾಗಿದೆ ಎನ್ನಲಾಗಿದೆ.
ಯಾವ ದಿನ? ಎಲ್ಲಿ ಮೋದಿ ಕಾರ್ಯಕ್ರಮ?
ಮೇ 01 – ಚಾಮರಾಜನಗರ, ಉಡುಪಿ, ಬೆಳಗಾವಿ
ಮೇ 03 – ಕಲಬುರಗಿ, ಬಳ್ಳಾರಿ, ಬೆಂಗಳೂರು
ಮೇ 05 – ತುಮಕೂರು, ಶಿವಮೊಗ್ಗ, ಹುಬ್ಬಳ್ಳಿ
ಮೇ 07 – ರಾಯಚೂರು, ಚಿತ್ರದುರ್ಗ, ಕೋಲಾರ
ಮೇ 08 – ಬಿಜಾಪುರ, ಮಂಗಳೂರು, ಬೆಂಗಳೂರು