ಬೆಂಗಳೂರು: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕುರಿತ ನನ್ನ ಹೇಳಿಕೆ ಬಗ್ಗೆ ನನಗೆ ವಿಷಾದವಿದೆ. ಭಾವೋದ್ವೇಗಕ್ಕೆ ಒಳಗಾಗಿ ಅಂತಹ ಹೇಳಿಕೆ ನೀಡಿದೆ. ಆದರೆ ಸಂಸದ ಪ್ರತಾಪ್ ಸಿಂಹ ಯೋಚನೆ ಮಾಡಿ ಹೀಗೆ ಮಾತಾಡುವುದು ಸರಿಯಲ್ಲ. ಅವರಷ್ಟು ಕೀಳು ಮಟ್ಟದಲ್ಲಿ ಮಾತನಾಡುವ ರಾಜಕಾರಣಿ ಇನ್ನೊಬ್ಬರಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕಿಡಿ ಕಾರಿದರು.
ನಗರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗುಂಡೂರಾವ್, ಜಮ್ಮು ಹಾಗೂ ಉತ್ತರ ಪ್ರದೇಶದಲ್ಲಿ ನಡೆದ ಎರಡು ಅತ್ಯಾಚಾರ ಪ್ರಕರಣಗಳು ದೇಶದ ಜನರ ಮನಸ್ಸನ್ನು ಕಲಕಿವೆ. ಅತ್ಯಾಚಾರದ ಆರೋಪಿ ಬಿಜೆಪಿ ಶಾಸಕನ ವಿರುದ್ಧ ಉತ್ತರ ಪ್ರದೇಶದ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಈ ವಿಚಾರದಲ್ಲಿ ಆದಿತ್ಯನಾಥ್ ಮತ್ತು ಪ್ರಧಾನಿ ನರೇಂದ್ರ ಮೋದಿ ಬೇಜವಾಬ್ದಾರಿಯಾಗಿ ನಡೆದುಕೊಂಡಿದ್ದಾರೆ. ಹೈಕೋರ್ಟ್ ಆದೇಶ ಬಂದ ನಂತರ ಶಾಸಕನ ವಿರುದ್ಧ ಕ್ರಮ ಕೈಗೊಳ್ಳಬೇಕಾಯಿತು. ಹೀಗಾಗಿ ನಾನು ಅವರ ವಿರುದ್ಧ ಮಾತನಾಡಿದೆ ಎಂದು ಸ್ಪಷ್ಟನೆ ನೀಡಿದರು.
ಯೋಗಿ ಆದಿತ್ಯನಾಥ್ ಕೂಡ ಒಬ್ಬ ರಾಜಕಾರಣಿ. ರಾಜಕಾರಣಿಯನ್ನು ಟೀಕೆ ಮಾಡುವುದು ತಪ್ಪೇ? ಎಂದ ಅವರು, ಆದಿತ್ಯನಾಥ್ ಸಂತನಲ್ಲ, ಆಧ್ಯಾತ್ಮ ಚಿಂತನೆ ಮಾಡುವ ಸ್ವಾಮೀಜಿಯಲ್ಲ, ಅವರ ವಿರುದ್ಧವೂ ಅನೇಕ ಪ್ರಕರಣಗಳಿವೆ. ಬಿಜೆಪಿಯವರು ಯೋಗಿಯನ್ನು ನಮ್ಮ ಸ್ವಾಮೀಜಿಗಳ ಜೊತೆ ಹೊಲಿಕೆ ಮಾಡುತ್ತಿದ್ದಾರೆ. ಧರ್ಮದ ವಿಚಾರದಲ್ಲಿ ಅಧರ್ಮ ಮಾಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
ಉತ್ತರ ಪ್ರದೇಶ ಮತ್ತು ಜಮ್ಮು ಕಾಶ್ಮೀರದಲ್ಲಿ ನಡೆಯುತ್ತಿರುವ ಅತ್ಯಾಚಾರ ಪ್ರಕರಣಗಳನ್ನು ಖಂಡಿಸಿ ನಗರದ ಮೌರ್ಯ ಸರ್ಕಲ್‍ನ ಗಾಂಧಿ ಪ್ರತಿಮೆ ಬಳಿ ಹಮ್ಮಿಕೊಂಡಿದ್ದ ಪ್ರತಿಭಟನೆ ಸಂದರ್ಭದಲ್ಲಿ ದಿನೇಶ್ ಗುಂಡುರಾವ್ ಅವರು ಮಾತನಾಡಿ, ಯುಪಿ ಸಿಎಂ ಯೋಗಿ ಆದಿತ್ಯನಾಥ್ ಮುಖ್ಯಮಂತ್ರಿ ಸ್ಥಾನದಲ್ಲಿ ಇರಲು ಅರ್ಹರಲ್ಲ. ಕೂಡಲೇ ಪ್ರಧಾನಿ ನರೇಂದ್ರ ಮೋದಿ ಅವರು ಅವರನ್ನು ಸಿಎಂ ಸ್ಥಾನದಿಂದ ಕಿತ್ತೊಗೆಯಬೇಕು. ಅವರು ಕರ್ನಾಟಕಕ್ಕೆ ಬಂದು ಭಾಷಣ ಮಾಡುತ್ತಾರೆ. ಈ ಬಾರಿ ಯೋಗಿ ಆದಿತ್ಯನಾಥ್ ಕರ್ನಾಟಕಕ್ಕೆ ಬಂದರೆ ಚಪ್ಪಲಿಯಲ್ಲಿ ಹೊಡೆಯಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಗುಂಡೂರಾವ್ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಸಂಸದ ಪ್ರತಾಪ್ ಸಿಂಹ ಅವರು, ಶನಿವಾರ ರಾತ್ರಿ ಬೆಂಗಳೂರಿನಲ್ಲಿ ನಡೆದಂತಹ ಮೇಣದ ಬತ್ತಿ ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷರು ತುಚ್ಚಾ ಮಾತುಗಳನ್ನು ಆಡಿದ್ದಾರೆ. ಯೋಗಿ ಆದಿತ್ಯನಾಥ್ ಅವರಿಗೆ ಚಪ್ಪಲಿಯಲ್ಲಿ ಹೊಡೆಯಬೇಕು ಅಂದಿದ್ದೀರಲ್ಲಾ ಗುಂಡೂರಾವ್ ಅವರೇ. ಯೋಗಿ ಬದಲು ಒಬ್ಬ ಮುಲ್ಲಾ ಅಥವಾ ಮೌಲ್ವಿ ಬಗ್ಗೆನೋ ಇದೇ ಮಾತನ್ನು ಆಡಿದ್ರೆ, ನಿಮ್ಮ ಹೆಂಡತಿ ಬೇಗಂ ತಬ್ಬು ಅವರೇ ಆ ಕೆಲಸವನ್ನು ನಿಮಗೆ ಮಾಡಿರುತ್ತಿದ್ದರು. ಮಾತನಾಡಬೇಕಾದರೆ ಸ್ವಲ್ಪ ಎಚ್ಚರಿಕೆ ಇರಬೇಕು. ನಾಲಿಗೆಯ ಮೇಲೆ ನಿಗಾ ಇರಬೇಕು. ಇಲ್ಲ ಅಂದರೆ ನಿಮಗೆ ತಕ್ಕ ಉತ್ತರ ಕೊಡಬೇಕಾಗುತ್ತದೆ’ ಎಂದು ವಿಡಿಯೋ ಮಾಡಿ ಫೇಸ್ಬುಕ್, ಟ್ವಿಟ್ಟರ್ ನಲ್ಲಿ ಹಾಕುವ ಮೂಲಕ ಗುಂಡೂರಾವ್ ವಿರುದ್ಧ ಕೆಂಡಾಮಂಡಲರಾಗಿದ್ದಾರೆ.