ಬೆಂಗಳೂರು: ರಾಜ ಆಗಲಿ, ಸೇವಕ ಆಗಲಿ, ಸತ್ತ ಮೇಲೆ ಬೇಕಿರೋದು ಮೂರಡಿ ಆರಡಿ ಜಾಗ. ಆ ಜಾಗ ಈಗ ಬಿಬಿಎಂಪಿ ನಿರ್ಲಕ್ಷ್ಯದಿಂದ ಗಾಂಜಾ ಹೋಡೆಯೋ ಸ್ಥಳವಾಗಿದೆ. ಇದೆಲ್ಲೋ ದೂರದ ಊರಿನ ಸುದ್ದಿ ಅಲ್ಲ ರಾಜಧಾನಿ ಬೆಂಗಳೂರಿನ ಸ್ಮಶಾನದ ಸುದ್ದಿಯಾಗಿದೆ. ಇಲ್ಲಿನ 5 ಎಕರೆ ಜಾಗ, ಈಗ ಬಿಬಿಎಂಪಿ ಡಂಪಿಂಗ್ ಯಾರ್ಡ್ ಆಗಿದೆ.
ಯಶವಂತಪುರ ಕ್ಷೇತ್ರದ ಹೇರೋಹಳ್ಳಿ ಗ್ರಾಮ ವಾರ್ಡ್ ನಂಬರ್ 72ರಲ್ಲಿ 5 ಎಕರೆ ಸ್ಮಶಾನ ಜಾಗ ಇದೆ. 2009ರಲ್ಲಿ ಇದನ್ನು ಬಿಬಿಎಂಪಿ ಸುಪರ್ದಿಗೆ ನೀಡಲಾಗಿತ್ತು. ಈ ಜಾಗ ಈಗ ಅನೈತಿಕ ಚಟುವಟಿಕೆಗಳ ತಾಣವಾಗಿದೆ. ಕದ್ದು-ಮುಚ್ಚಿ ಗಾಂಜಾ ಸೇದೋಕೆ ಅಂತಾನೇ ಇಲ್ಲಿಗೆ ಯುವಕರು ಬರ್ತಿದ್ದಾರೆ.
ಅಷ್ಟೇ ಅಲ್ಲದೇ ಬಿಬಿಎಂಪಿ ನಿರ್ಲಕ್ಷ್ಯದಿಂದ ಇದು ಡಂಪಿಂಗ್ ಯಾರ್ಡ್ ಆಗಿ ಬದಲಾಗಿದೆ. ಬಿಬಿಎಂಪಿ ನಿರ್ಮಿಸಿದ್ದ ಸುತ್ತಲಿನ ಕಾಂಪೌಂಡ್ ನ್ನು ಡಂಪ್ ಮಾಡೋಕೆ ಸುಲಭ ಆಗಲಿ ಎಂದು ತೆರವು ಮಾಡಿದ್ದಾರೆ. ದಿನಕ್ಕೆ ಸುಮಾರು 10 ರಿಂದ 20 ಗಾಡಿಗಳಲ್ಲಿ ಕಸ ತಂದು ಇಲ್ಲಿ ಸುರಿಯುತ್ತಿದ್ದಾರೆ. ಇದರಿಂದ ಇಲ್ಲಿ ಓಡಾಡೋಕು ಹಿಂಸೆಯಾಗುತ್ತದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಇನ್ನು ಈ ಸ್ಮಶಾನದಲ್ಲೂ ದೊಡ್ಡ ರಾಜಕೀಯ ನಡೆದಿದೆ. ಕುರುಬ ಜನಾಂಗದವರನ್ನು ಓಲೈಸಿಕೊಳ್ಳಲು ಇಲ್ಲಿ ಕಾಂಗ್ರೆಸ್ ನವರು ಕನಕ ಭವನ ನಿರ್ಮಾಣ ಮಾಡಿದ್ದಾರೆ. ಜೊತೆ ಕೆಂಪೇಗೌಡ ನಿರ್ಮಾಣಕ್ಕೆ ಪಿಲ್ಲರ್ ಕೂಡ ಹಾಕಿದ್ದಾರೆ. ಗ್ರಾಮಸ್ಥರು ಕೋರ್ಟ್‍ನಲ್ಲಿ ದಾವೆ ಹೂಡಿರುವುದರಿಂದ ಇದಕ್ಕೆ ಕೋರ್ಟ್ ತಡೆಯಾಜ್ಞೆ ತಂದಿದೆ.