ಬೆಂಗಳೂರು: ಕನ್ನಡದ ಬೆಸ್ಟ್ ಜೋಡಿಗಳಲ್ಲಿ ನಟ ದರ್ಶನ್ ಮತ್ತು ರಕ್ಷಿತಾ ಜೋಡಿ ಕೂಡ ಒಂದಾಗಿತ್ತು. ಒಂದು ಕಾಲದಲ್ಲಿ ಈ ಇಬ್ಬರು ಒಟ್ಟಿಗೆ ತೆರೆ ಮೇಲೆ ಬಂದರೆ ಪ್ರೇಕ್ಷಕರಿಗೆ ಮೋಡಿ ಮಾಡಿದಂತೆ ಇರುತ್ತಿತ್ತು.
ದರ್ಶನ್ ಮತ್ತು ರಕ್ಷಿತಾ ಒಟ್ಟಿಗೆ `ಕಲಾಸಿಪಾಳ್ಯ’, `ಅಯ್ಯ’, `ಮಂಡ್ಯ’ ಮತ್ತು `ಸುಂಟರಗಾಳಿ’ ಸಿನಿಮಾದಲ್ಲಿ ನಟಿಸಿದ್ದಾರೆ. ಈ ಎಲ್ಲಾ ಸಿನಿಮಾಗಳು ಹಿಟ್ ಆಗಿತ್ತು. ರಕ್ಷಿತಾ ಸದ್ಯ ತೀರ್ಪುಗಾರ್ತಿಯಾಗಿ ಬ್ಯುಸಿಯಾಗಿದ್ದಾರೆ.
ಅಷ್ಟೇ ಅಲ್ಲದೇ ರಕ್ಷಿತಾ ಅವರು ತೆರೆ ಮೇಲೆ ಬಂದು ಅನೇಕ ವರ್ಷಗಳೇ ಉರುಳಿವೆ. ಆದರೆ ಈಗ ಮತ್ತೆ ದರ್ಶನ್ ಸಿನಿಮಾದಲ್ಲಿ ನಟಿಸಬೇಕೆಂಬ ಆಶಯವನ್ನು ವ್ಯಕ್ತಪಡಿಸಿದ್ದಾರೆ. ಖಾಸಗಿ ವಾಹಿನಿಯಲ್ಲಿ ನಟ ಶಿವರಾಜ್ ಕುಮಾರ್ ನಡೆಸಿಕೊಡುವ `ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಯಕ್ಕೆ ನಟಿ ರಕ್ಷಿತಾ ಮತ್ತು ರಾಗಿಣಿ ಆಗಮಿಸಿದ್ದಾರೆ. ಈ ಸಂಚಿಕೆಯ ಪ್ರೋಮೋ ಇದೀಗ ಬಿಡುಗಡೆಯಾಗಿದೆ.
ಶಿವಣ್ಣ ಕಾರ್ಯಕ್ರಮದಲ್ಲಿ ಈಗಿನ ಹೀರೋಗಳಲ್ಲಿ ನೀವು ಯಾರ ಜೊತೆಗೆ ಮತ್ತೆ ನಟನೆ ಮಾಡಲು ಇಷ್ಟ ಪಡುತ್ತೀರಾ? ಎಂದು ಪ್ರಶ್ನೆ ಕೇಳಿದ್ದಾರೆ. ಆಗ ರಕ್ಷಿತಾ ನನಗೆ ದರ್ಶನ್ ಜೊತೆಗೆ ಮತ್ತೆ ನಟಿಸುವ ಇಷ್ಟ ಇದೆ ಎಂದು ಉತ್ತರಿಸಿದ್ದಾರೆ.
ನಟಿ ರಕ್ಷಿತಾ ಮತ್ತು ರಾಗಿಣಿ ದ್ವಿವೇದಿ ಅವರ `ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದ ಸಂಚಿಕೆ ಇದೇ ಭಾನುವಾರ ರಾತ್ರಿ 8 ಗಂಟೆಗೆ ಖಾಸಗಿ ವಾಹಿನಿಯಲ್ಲಿ ಪ್ರಸಾರ ಆಗಲಿದೆ. ಸದ್ಯಕ್ಕೆ ರಕ್ಷಿತಾ ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ಕಾಮಿಡಿ ಕಿಲಾಡಿಗಳು’ ಶೋನಲ್ಲಿ ತೀರ್ಪುಗಾರ್ತಿಯಾಗಿದ್ದಾರೆ.