ಕೊಪ್ಪಳ: ಸಂವಿಧಾನ ಉಳಿವಿಗಾಗಿ- ಕರ್ನಾಟಕ ಕಾರ್ಯಕ್ರಮದಲ್ಲಿ ಕುರುಡು ಕಾಂಚಾಣ ಕುಣಿದಿದೆ. ಕೊಪ್ಪಳದ ಗಂಗಾವತಿಯಲ್ಲಿ ನಡೆದ ಚುನಾವಣಾ ಪ್ರಚಾರ ಕಾರ್ಯಕ್ರಮದ ನಂತರ ಲಕ್ಷಾಂತರ ರೂಪಾಯಿ ಕಾರ್ಯಕರ್ತರ ಕೈಯಿಂದ ಕೈಗೆ ಬದಲಾಗಿದೆ ಅನ್ನೋ ಆರೋಪವೊಂದು ಕೇಳಿಬಂದಿದೆ.
ನಗರಸಭೆ ಸದಸ್ಯ ಹುಸೇನಪ್ಪ ಹಂಚಿನಾಳ ನೇತೃತ್ವದಲ್ಲಿ ಚುನಾವಣಾ ಪ್ರಚಾರ ಕಾರ್ಯಕ್ರಮ ನಡೆದಿತ್ತು. ಕಾರ್ಯಕ್ರಮ ನಡೆದ ಬಳಿಕ ಆವರಣದಲ್ಲೇ ಲಕ್ಷಾಂತರ ರೂಪಾಯಿ ಕೈಯಿಂದ ಕೈಗೆ ಬದಲಾಗುವ ದೃಶ್ಯಗಳು ಸೆರೆಯಾಗಿದೆ. ಕಾರ್ಯಕರ್ತರು ಹಣ ಎಣಿಕೆ ಮಾಡುತ್ತಿರುವ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಕಾರ್ಯಕ್ರಮದಲ್ಲಿ ಗುಜರಾತಿನ ವಾಡ್ಗಮ್ ಶಾಸಕ ಜಿಗ್ನೇಶ್ ಮೆವಾನಿ ಭಾಗವಹಿಸಿದ್ದರು. ತಮ್ಮ ಭಾಷಣದಲ್ಲಿ ಬಿಜೆಪಿ, ಕೇಂದ್ರ ಸರ್ಕಾರದ ನೀತಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು.
ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದ್ದರೂ ಕಾರ್ಯಕ್ರಮದ ಆವರಣದಲ್ಲೇ ಲಕ್ಷಾಂತರ ರೂಪಾಯಿ ಕೈಯಿಂದ ಕೈಗೆ ಬದಲಾಗಿದ್ದು ಏಕೆ ಅನ್ನುವ ಪ್ರಶ್ನೆ ಈಗ ಉದ್ಭವವಾಗಿದೆ. ಅಲ್ಲದೇ ಜನರನ್ನು ಹಣ ಕೊಟ್ಟು ಕರೆತಂದಿದ್ದಾರೆಯೇ ಎಂಬ ಮಾತುಗಳೂ ಕೇಳಿ ಬರುತ್ತಿವೆ. ಬಿಜೆಪಿ ಭ್ರಷ್ಟಾಚಾರದ ವಿರುದ್ಧ ಮಾತನಾಡುವ ಜಿಗ್ನೇಶ್‍ಗೆ ಇದು ಗೊತ್ತಾಯ್ತಾ ಎಂಬ ಟೀಕೆ ವ್ಯಕ್ತವಾಗುತ್ತಿದೆ.
ಹುಸೇನಪ್ಪ ಹಂಚಿನಾಳ ಮಾಜಿ ಶಾಸಕ ಇಕ್ಬಾಲ್ ಅನ್ಸಾರಿ ಆಪ್ತರು ಎಂದು ತಿಳಿದು ಬಂದಿದೆ.