ದಾವಣಗೆರೆ: ಕ್ಲಾಸ್ ಟೀಚರ್ ಮೊಬೈಲ್ ನಲ್ಲಿ ಇದ್ದ ಫೋಟೋ ಡಿಲೀಟ್ ಮಾಡಿದ್ದಕ್ಕೆ, ಪೋಷಕರು ಹೊಡೆಯುತ್ತಾರೆ ಎಂದು ಹೆದರಿ ಬಾಲಕನೊಬ್ಬ ಮನೆ ಬಿಟ್ಟು ಪರಾರಿಯಾದ ಘಟನೆ ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಅಣ್ಣೀಗೆರೆ ಗ್ರಾಮದಲ್ಲಿ ನಡೆದಿದೆ.
ಪ್ರಜ್ವಲ್(15) ಮನೆ ಬಿಟ್ಟು ಪರಾರಿಯಾದ ಬಾಲಕನಾಗಿದ್ದು, ಬುಧವಾರ ಕ್ಲಾಸ್ ನಲ್ಲಿ ಟೀಚರ್ ನ ಮೊಬೈಲ್ ತೆಗೆದುಕೊಂಡಿದ್ದ ಪ್ರಜ್ವಲ್ ಅದರಲ್ಲಿದ್ದ ಫೋಟೋಗಳನ್ನು ಡಿಲೀಟ್ ಮಾಡಿದ್ದನು. ಇದರಿಂದ ಸಿಟ್ಟಾದ ಟೀಚರ್ ನಿಮ್ಮ ಮನೆಯವರಿಗೆ ಹೇಳುತ್ತೇನೆ ಎಂದು ಹೆದರಿಸಿದ್ದಾರೆ.
ಮನೆಗೆ ಹೋದರೆ ಎಲ್ಲಿ ತನ್ನ ತಾಯಿ ಹೊಡೆಯುತ್ತಾರೆ ಎಂದು ಹೆದರಿ ಪ್ರಜ್ವಲ್ ಮನೆ ಬಿಟ್ಟು ಓಡಿ ಹೋಗಿದ್ದಾನೆ. ಓಡಿ ಹೋದ ಮಗನನ್ನು ನೋಡಬೇಕೆಂದು ಪ್ರಜ್ವಲ್ ತಾಯಿ ರೋಧನೆ ಅನುಭವಿಸುತ್ತಿದ್ದಾರೆ.
ಈ ಬಗ್ಗೆ ಸಂತೆಬೆನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು. ಬಾಲಕನಿಗಾಗಿ ಪೊಲೀಸರು ಹಾಗೂ ಬಾಲಕನ ಸಂಬಂಧಿಕರು ಹುಡುಕಾಟ ನಡೆಸುತ್ತಿದ್ದಾರೆ.