ಸಚಿವ ಪ್ರಮೋದ್ ಮಧ್ವರಾಜ್ ಪ್ರಚಾರದ ವಾಹನಕ್ಕೆ ಕೈ ಬಂತು ಕೈ!

Public TV
1 Min Read
udp

ಉಡುಪಿ: ಚುನಾವಣಾ ಪ್ರಚಾರ ವಾಹನದಲ್ಲಿ ಎಐಸಿಸಿ ರಾಹುಲ್ ಗಾಂಧಿ, ಸಿಎಂ ಸಿದ್ದರಾಮಯ್ಯ ಸೇರಿದಂತೆ ಯಾವೊಬ್ಬ ನಾಯಕರ ಭಾವಚಿತ್ರ ಹಾಕದೆ ಪ್ರಚಾರ ವಾಹನ ಸಿದ್ಧಗೊಳಿಸಿದ್ದ ಸಚಿವ ಪ್ರಮೋದ್ ಮಧ್ವರಾಜ್ ಬೀಸುವ ದೊಣ್ಣೆಯಿಂದ ತಪ್ಪಿಸಿಕೊಂಡಿದ್ದು, ತಮ್ಮ ಪ್ರಚಾರ ವಾಹನದಲ್ಲಿ ಕಾಂಗ್ರೆಸ್ ಪಕ್ಷದ `ಕೈ’ ಚಿನ್ಹೆಯನ್ನು ಅಂಟಿಸಿದ್ದಾರೆ.

ಕಳೆದ 15 ದಿನದಿಂದ ಮೀನುಗಾರಿಕಾ, ಯುವಜನ ಮತ್ತು ಕ್ರೀಡಾ ಸಚಿವರಾಗಿರುವ ಪ್ರಮೋದ್ ಮಧ್ವರಾಜ್ ತಮ್ಮ ಪಕ್ಷದ ಯಾವುದೇ ಕುರುಹು ಇಲ್ಲದೆ ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡಿದ್ದರು. ಸಿಎಂ ಸಿದ್ದರಾಮಯ್ಯ, ಕೇಂದ್ರ ನಾಯಕರುಗಳಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ ಅಥವಾ ಪಕ್ಷದ ಚಿನ್ಹೆ ಇಲ್ಲದೆ ಮಧ್ವರಾಜ್ ಪ್ರಚಾರ ವಾಹನವನ್ನು ತನ್ನೊಬ್ಬನದ್ದೇ ಕಟೌಟ್ ಹಾಕಿ ಸಿಂಗಾರ ಮಾಡಿದ್ದರು. ಈ ಬೆಳವಣಿಗೆ ರಾಜ್ಯವ್ಯಾಪಿ ಸುದ್ದಿಯಾಗಿತ್ತು.

UDP MADWARAJ AVB 3

ಸಚಿವರ ಈ ನಡೆ ಪಕ್ಷದ ಹಿರಿಯರ ಕೆಂಗಣ್ಣಿಗೆ ಕಾರಣವಾಗಿತ್ತು. ಆದರೆ ಈ ಕುರಿತು ಸ್ಪಷ್ಟನೆ ನೀಡಿದ್ದ ಸಚಿವರು ಮಧ್ವರಾಜ್ ಅಭಿಮಾನಿಗಳ ಸಂಘ ದ ವತಿಯಿಂದ ವಾಹನ ತಯಾರು ಮಾಡಿರುವುದರಿಂದ ಪಕ್ಷಕ್ಕೂ ಇದಕ್ಕೂ ಸಂಬಂಧ ಇಲ್ಲ ಎಂದು ಹೇಳಿದ್ದರು. ಆದರೆ ಸಚಿವರ ಈ ಹೇಳಿಕೆಗೆ ಪಕ್ಷದ ಉಡುಪಿ ಜಿಲ್ಲಾಧ್ಯಕ್ಷರು ಮುನಿಸಿಕೊಂಡಿದ್ದರು. ಪಕ್ಷದ ಹಿರಿಯರಿಗೂ ಪ್ರಮೋದ್ ಮಧ್ವರಾಜ್ ಅವನ ವನ್ ಮ್ಯಾನ್ ಶೋ ಬಗ್ಗೆ ಅಸಮಾಧಾನ ಉಂಟಾಗಿತ್ತು ಎನ್ನಲಾಗಿದೆ.

ಇದೀಗ ಚುನಾವಣೆಯ ಹೊಸ್ತಿಲಲ್ಲಿ ಗೊಂದಲಗಳನ್ನು ಮೈಮೇಲೆ ಏಳೆದುಕೊಳ್ಳುವುದು ಬೇಡ ಎಂದು ನಿರ್ಧರಿಸಿರುವ ಪ್ರಮೋದ್ ಮಧ್ವರಾಜ್, ಕಾಂಗ್ರೆಸ್ ನ ಹಸ್ತದ ಚಿನ್ಹೆಯನ್ನು ತಮ್ಮ ಪ್ರಚಾರ ವಾಹನದಲ್ಲಿ ಅಂಟಿಸಿದ್ದಾರೆ. ಪ್ರಚಾರಕ್ಕಾಗಿ ಬಳಕೆ ಮಾಡುತ್ತಿರುವ ಎರಡು ವಾಹನದಲ್ಲಿ ಈಗ ಹಸ್ತದ ಚಿನ್ಹೆ ರಾರಾಜಿಸುತ್ತಿದೆ.

ವಾಹನಗಳ ಹಿಂದೆ ಮುಂದೆ, ಅಕ್ಕ ಪಕ್ಕ ಹಸ್ತದ ಚಿತ್ರವನ್ನು ಉಡುಪಿ ಪ್ರವಾಸಿ ಮಂದಿರದಲ್ಲಿ ಅಂಟಿಸಿ ವಾಹನಗಳನ್ನು ಪ್ರಚಾರಕ್ಕೆ ಕೊಂಡೊಯ್ಯಲಾಗಿದೆ. ಈ ಮೂಲಕ ಕಾಂಗ್ರೆಸ್ ಹಿರಿಯ ನಾಯಕರು, ಕಾರ್ಯಕರ್ತರು ಮತದಾರರನ್ನು ತೃಪ್ತಿಪಡಿಸಲು ಪ್ರಮೋದ್ ಮಧ್ವರಾಜ್ ಮುಂದಾಗಿದ್ದಾರೆ ಎಂಬ ಮಾತು ಕೇಳಿ ಬಂದಿದೆ.

UDP MADAVRAJ VAN AV 5

Share This Article
Leave a Comment

Leave a Reply

Your email address will not be published. Required fields are marked *