ವಿಜಯಪುರ: ಕಾಂಗ್ರೆಸ್ ಉಚ್ಛಾಟಿತರಾಗಿ ಜೆಡಿಎಸ್ ನಲ್ಲಿ ಗುರುತಿಸಿಕೊಂಡಿದ್ದ ಶಾಸಕ ಎ.ಎಸ್.ಪಾಟೀಲ ನಡಹಳ್ಳಿ ಬಿಜೆಪಿ ಸೇರಲಿದ್ದಾರೆ ಎಂಬ ಸುದ್ದಿಗಳು ಜಿಲ್ಲೆಯಾದ್ಯಂತ ಕೇಳಿ ಬರುತ್ತಿವೆ ಶಾಸಕ ನಡಹಳ್ಳಿ ಅವರು ಬಿಜೆಪಿ ಸೇರುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ ಅಂತಾ ವಿಜಯಪುರ ಬಿಜೆಪಿ ಜಿಲ್ಲಾಧ್ಯಕ್ಷ ವಿಠ್ಠಲ್ ಕಟಕದೊಂಡ ಹೇಳಿದ್ದಾರೆ.
ನೇರವಾಗಿ ನನಗೆ ಹೇಳದಿದ್ದರೂ, ನಮ್ಮ ಪಕ್ಷದ ಹಿರಿಯ ಮುಖಂಡರೊಂದಿಗೆ ನಡಹಳ್ಳಿ ಅವರು ಚರ್ಚಿಸಿರುವ ಮಾಹಿತಿ ನನಗೆ ಬಂದಿದೆ. ಇದೇ ರೀತಿಯಾಗಿ ಇನ್ನೂ ಹಲವು ಕಾಂಗ್ರೆಸ್ ಶಾಸಕರು ಮತ್ತು ಮುಖಂಡರು ಬಿಜೆಪಿ ಸೇರಲಿದ್ದಾರೆ. ಜಿಲ್ಲೆಯಲ್ಲಿ ಜೆಡಿಎಸ್ ಗೆ ಭವಿಷ್ಯವಿಲ್ಲ ಎಂದು ಅರಿತು ಬಿಜೆಪಿಗೆ ಸೇರಲು ನಡಹಳ್ಳಿ ಬಯಸಿದ್ದಾರೆಂದು ಅಂತಾ ವಿಠ್ಠಲ್ ಕಟಕದೊಂಡ ತಿಳಿಸಿದ್ದಾರೆ.
ಬಿಜೆಪಿ ಸೇರ್ಪಡೆಯ ಬಗ್ಗೆ ಯಾವುದೇ ಗುಟ್ಟು ಬಿಟ್ಟು ಕೊಡದ ಶಾಸಕ ನಡಹಳ್ಳಿ ಅವರು ಮುಂದೆ ಏನಾಗುತ್ತೆ ಎಂಬುದನ್ನು ಕಾದು ನೋಡಿ ಅಂತಾ ಹೇಳಿದ್ದಾರೆ. ನಡಹಳ್ಳಿ ಅವರು ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ಕ್ಷೇತ್ರದಿಂದ ಚುನಾವಣೆಗೆ ಸ್ಫರ್ಧಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ ಎನ್ನಲಾಗುತ್ತಿದ್ದು, ಇದೇ ತಿಂಗಳು 23ರಂದು ನಡಹಳ್ಳಿ ಬಿಜೆಪಿ ಸೇರ್ಪಡೆಯ ಅಧಿಕೃತ ಮಾಹಿತಿ ಹೊರಬೀಳಲಿದೆ ಎಂದು ತಿಳಿದು ಬಂದಿದೆ.