ಬೆಂಗಳೂರು: ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಈ ಬಾರಿ ಸಿಎಂ ಸಿದ್ದರಾಮಯ್ಯರನ್ನು ಸೋಲಿಸಲು ಬಿಜೆಪಿ ರಾಜಕೀಯ ತಂತ್ರಗಳನ್ನು ಪ್ರಯೋಗಿಸಲು ಸಜ್ಜಾಗಿದೆ. ಒಂದು ವೇಳೆ ಸಿಎಂ ಸಿದ್ದರಾಮಯ್ಯ ಚುನಾವಣೆಯಲ್ಲಿ ಸೋತರೆ ಕಾಂಗ್ರೆಸ್ ಗೆ ಭಾರೀ ಮುಖಭಂಗ ಆಗಲಿದೆ. ಈ ಹಿನ್ನೆಲೆಯಲ್ಲಿ ಬಿಜೆಪಿ ಹೈಕಮಾಂಡ್ ರಾಜ್ಯ ನಾಯಕರಿಗೆ ಮಹತ್ವದ ಸೂಚನೆಯನ್ನು ರವಾನೆ ಮಾಡಲಾಗಿದ ಎನ್ನಲಾಗಿದೆ.
ಮಾರ್ಚ್ 10 ರಂದು ಮೈಸೂರಿನಲ್ಲಿ ನೂತನವಾಗಿ ನಿರ್ಮಾಣ ಮಾಡಿರುವ ಜಯದೇವ ಆಸ್ಪತ್ರೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಸಿಎಂ ಸರ್ಕಾರದ ಕೊಡುಗೆಗಳನ್ನು ತಿಳಿಸಿದ್ದರು. ರಾಜ್ಯದಲ್ಲಿ ಮೈಸೂರು ರಾಜರ ನಂತರ ಯಾವುದಾದರೂ ಸರ್ಕಾರ ಅಭಿವೃದ್ಧಿ ಕೆಲಸ ಮಾಡಿದೆ ಎಂದರೇ ಅದು ನಮ್ಮ ಸರ್ಕಾರ ಮಾತ್ರ ಎಂದು ಸಿಎಂ ಸಿದ್ದರಾಮಯ್ಯ ಹೆಮ್ಮೆಯಿಂದ ಹೇಳಿಕೊಂಡಿದ್ದರು. ಸಿಎಂ ಅವರ ಇದೇ ಮಾತುಗಳನ್ನು ಅಸ್ತ್ರವಾಗಿ ಬಳಸಿಕೊಂಡು ಮಹಾರಾಜರ ಕಾಲದ ಕೆಸಲಕ್ಕೆ ಸಿದ್ದು ಸರ್ಕಾರದ ಕೆಲಸ ಹೋಲಿಕೆ ಮಾಡಿ ವಾಗ್ದಾಳಿ ನಡೆಸುವಂತೆ ಸೂಚಿಸಲಾಗಿದೆ ಎಂಬ ಮಾಹಿತಿಗಳು ಲಭ್ಯವಾಗಿವೆ.
ಸಿಎಂ ಸಿದ್ದರಾಮಯ್ಯ ಅವರು ಕಳೆದ ಐದು ವರ್ಷದಲ್ಲಿ ಏನು ಮಾಡಿದ್ದಾರೆ ಅನ್ನುವುದನ್ನು ಜನ ತೀರ್ಮಾನ ಮಾಡುತ್ತಾರೆ. ಜನರಿಗೆ ಎಲ್ಲವೂ ಗೊತ್ತಿದೆ. ರಾಜರು ನೀಡಿದ ಕೊಡುಗೆಯನ್ನು ಜನರು ಯಾವತ್ತು ಮರೆಯುವುದಿಲ್ಲ. ಮೈಸೂರು ಸಂಸ್ಥಾನ ಕೊಡುಗೆ ಎಲ್ಲರಿಗೂ ಗೊತ್ತಿದೆ ಅಂತ ಮೈಸೂರು ಮಹರಾಜ ಯದುವೀರ್ ಒಡೆಯರ್ ಖಾರವಾಗಿ ಪ್ರತಿಕ್ರಿಯಿಸಿದ್ದರು.
ಯದುವೀರ್ ಸಿಎಂ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸುತ್ತಿದ್ದಂತೆ ಬಿಜೆಪಿ ಸಖತ್ ಪ್ಲಾನ್ ರೂಪಿಸಿಕೊಂಡಿದೆ. ರಾಜಕಾರಣದ ಬಗ್ಗೆ ಆಸಕ್ತಿ ಹೊಂದಿರುವ ಯದುವೀರ್ ಒಡೆಯರ್ ಅವರನ್ನು ಲೋಕಸಭೆ ಚುನಾವಣೆ ಒಳಗಾಗಿಯಾದ್ರೂ ಬಿಜೆಪಿಗೆ ಸೆಳೆಯುವಂತೆ ಪ್ಲ್ಯಾನ್ ಮಾಡಲಾಗ್ತಿದೆ ಎಂದು ತಿಳಿದು ಬಂದಿದೆ.