ಮೈಸೂರು: ಮೃಗಾಲಯಕ್ಕೆ ಹುಲಿಗಳು ದೊಡ್ಡ ತಲೆನೋವು ತಂದಿಟ್ಟಿವೆ. ತನ್ನ ಸಾಮಥ್ರ್ಯಕ್ಕಿಂತ ಹೆಚ್ಚು ಹುಲಿಗಳನ್ನು ಪೋಷಿಸುವ ಅನಿವಾರ್ಯತೆಗೆ ಮೈಸೂರು ಮೃಗಾಲಯ ಸಿಲುಕಿದ್ದು ಹೆಚ್ಚುವರಿಯಾಗಿರುವ ಹುಲಿಗಳನ್ನು ಎಲ್ಲಿಗೆ ಬಿಡಬೇಕು, ಯಾರಿಗೆ ಕೊಡಬೇಕು ಅನ್ನೋ ಚಿಂತೆಯಲ್ಲಿ ಅಧಿಕಾರಿಗಳು ಮುಳುಗಿದ್ದಾರೆ.
ಒಂದು ಮೃಗಾಲಯದಲ್ಲಿ 10 ಹುಲಿಗಳಿರಬೇಕು. ಸದ್ಯ ಮೈಸೂರು ಮೃಗಾಲಯದಲ್ಲಿ 16 ಹುಲಿಗಳಿವೆ. ಹೆಚ್ಚೆಂದರೆ 3 ಹುಲಿಗಳನ್ನು ಹೆಚ್ಚುವರಿಯಾಗಿ ಇಟ್ಟುಕೊಳ್ಳಬಹುದು. ಆದ್ರೆ 6 ಹುಲಿಗಳನ್ನು ಪೋಷಿಸುವ ಅನಿವಾರ್ಯತೆಯಲ್ಲಿ ಮೈಸೂರು ಮೃಗಾಲಯ ಸಿಲುಕಿದೆ.
ಮೃಗಾಲಯದಲ್ಲೀಗ 6 ಹುಲಿಗಳ ಪೋಷಣೆ ಮಾಡುತ್ತಿದ್ದು, ಕೂರ್ಗಳ್ಳಿ ಪುನರ್ವಸತಿ ಕೇಂದ್ರದಲ್ಲಿ 10 ಹುಲಿಗಳ ಪೋಷಣೆ ಮಾಡಲಾಗುತ್ತಿದೆ. ಮೈಸೂರು ಭಾಗದಲ್ಲಿ ಮಾನವ-ಕಾಡು ಪ್ರಾಣಿಗಳ ಸಂಘರ್ಷ ಹೆಚ್ಚಾಗಿ ನಾಡಿನತ್ತ ಹುಲಿಗಳು ಬರುತ್ತಿವೆ. ಹೀಗೆ ಬಂದ ಹುಲಿಗಳನ್ನು ಅರಣ್ಯ ಇಲಾಖೆ ಸೆರೆ ಹಿಡಿದು ಮೃಗಾಲಯಕ್ಕೆ ನೀಡುತ್ತಿದೆ. ಹೀಗೆ ನೀಡುವ ಹುಲಿಗಳನ್ನು ಬೇಡವೆನ್ನಲಾಗದೆ ಮೈಸೂರು ಮೃಗಾಲಯ ಪೋಷಿಸುತ್ತಿದೆ.