ಬೆಂಗಳೂರು: ಸರ್ಕಾರ ಯಾವುದೇ ಬಾವುಟ ಮಾಡಲಿ, ನಮ್ಮ ಅಧಿಕೃತ ಬಾವುಟ ಹಳದಿ ಕೆಂಪು. ನಮ್ಮ ಹೋರಾಟ ಹಾಗೂ ಚಳುವಳಿಗೆ ಹಳದಿ ಕೆಂಪು ಬಾವುಟವನ್ನೇ ಮುಂದುವರೆಸುತ್ತೇವೆ ಎಂದು ಕನ್ನಡಪರ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ಹೇಳಿದ್ದಾರೆ.
ನಗರದ ಖಾಸಗಿ ಹೋಟೆಲ್‍ನಲ್ಲಿ ನಡೆದ ಸುದ್ದಿಗೊಷ್ಠಿಯಲ್ಲಿ ಮಾತನಾಡಿದ ಅವರು, ಬಾವುಟದ ಇತಿಹಾಸ ಗೊತ್ತಿಲ್ಲದವರು ಸರ್ಕಾರಿ ಬಾವುಟ ಮಾಡಲು ಹೊರಟಿರುವುದು ಮೂರ್ಖತನವಾಗಿದೆ. ಹಳದಿ ಮತ್ತು ಕರ್ನಾಟಕ ಚಿತ್ರ ಇರುವ ಬಾವುಟ 1964 ರಲ್ಲಿ ಸಿದ್ಧವಾಗಿತ್ತು. 1966 ರಲ್ಲಿ ಹಳದಿ ಹಾಗೂ ಕೆಂಪು ಬಾವುಟವನ್ನ ನಾನು ಹಾಗೂ ರಾಮಮೂರ್ತಿ ಅವರು ಸೇರಿ ತಯಾರಿಸಿದ್ದೆವು. ಕರ್ನಾಟಕ ಬಾವುಟಕ್ಕೆ ತುಂಬಾ ಇತಿಹಾಸವಿದೆ ಎಂದು ಹೇಳಿದರು.
ಹಳದಿ ಹಾಗೂ ಕೆಂಪು ಬಾವುಟಕ್ಕೆ ಒಂದು ಶಕ್ತಿ ಇದೆ. ಈ ಬಾವುಟ ಜನರ ಹೃದಯಕ್ಕೆ ಹತ್ತಿರವಾಗಿದೆ. ಅಷ್ಟೇ ಅಲ್ಲದೇ ವಿದೇಶದಲ್ಲಿ ಕೂಡ ಈ ಬಾವುಟ ರಾರಾಜಿಸುತ್ತಿದೆ. ಇಂತಹ ಬಾವುಟವನ್ನು ಯಾವುದೇ ಸರ್ಕಾರ, ರಾಜಕಾರಣಿಗಳು, ಮತ್ತು ಸಾಹಿತಿಗಳು ಇದುವರೆಗೂ ಯಾವ ವಿರೋಧವನ್ನು ಮಾಡಿಲ್ಲ. ತೆರೆಮರೆಯಲ್ಲಿಯೂ ಈ ಕೂಡ ಬಾವುಟವನ್ನು ಯಾರು ವಿರೋಧ ಮಾಡಿಲ್ಲ ಎಂದರು.
2018 ರ ತನಕ ಅದ್ಭುತವಾಗಿ ಮೆರೆದಿದ್ದ ಈ ಬಾವುಟವನ್ನ ಸರ್ಕಾರವೂ ನಾಡ ಧ್ವಜ ಎಂದು ಮಾಡಿದ್ದಾರೆ. ಆದರೆ ಹಳದಿ ಹಾಗೂ ಕೆಂಪು ಬಾವುಟವನ್ನೇ ನಾಡಧ್ವಜವನ್ನಾಗಿ ಮಾಡಿದರೆ ಜನರ ಪ್ರೀತಿಗೆ ಪಾತ್ರರಾಗುತ್ತಿದ್ದರು. ನಾಡಧ್ವಜದ ಬದಲಾವಣೆ ಮಾಡುವುದು ಬೇಕಾಗಿಲ್ಲ. ಬಾವುಟದ ಮಧ್ಯೆ ಬಿಳಿ ಬಣ್ಣದ ಅವಶ್ಯಕತೆ ಇರಲಿಲ್ಲ. ಇದು ಅವಿವೇಕದ ನಿರ್ಧಾರ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
ನೂತನ ಬಾವುಟಕ್ಕೆ ಒಪ್ಪಿಗೆ ಸೂಚಿಸಿದ ಸಾಹಿತಿಗಳ ವಿರುದ್ಧ ವಾಗ್ದಾಳಿ ನಡೆಸಿದ ವಾಟಾಳ್, ರಾಜ್ಯದಲ್ಲಿ ಚುನಾವಣೆ ಸಮೀಪ ಇರುವಾಗಲೇ ಧ್ವಜ ಬದಲಾವಣೆ ಮಾಡುವ ಅವಶ್ಯಕತೆ ಇರಲಿಲ್ಲ. ತರಾತುರಿಯಲ್ಲಿ ಬಾವುಟ ಬದಲಾವಣೆ ಮಾಡಿ ಕೇಂದ್ರಕ್ಕೆ ಶಿಫಾರಸು ಮಾಡಿರುವ ಸರ್ಕಾರದ ಕೃತ್ಯ ಸಹಿಸಲು ಆಗುತ್ತಿಲ್ಲ. ಯಾವುದೇ ಸರ್ಕಾರ ಇರಲಿ, ಅದಕ್ಕೆ ಕೆಲ ಸಾಹಿತಿಗಳು ಮುದ್ರೆ ಒತ್ತುತ್ತಾರೆ. ಈ ಸಾಹಿತಿಗಳಿಗೆ ಬಾವುಟದ ಬಗ್ಗೆ ಸ್ವಲ್ಪವೂ ಜ್ಞಾನ ಹಾಗೂ ಇತಿಹಾಸ ಗೊತ್ತಿಲ್ಲ ಎಂದು ಹೇಳಿದರು.
ಗುರುವಾರ ಗೃಹ ಕಚೇರಿ ಕೃಷ್ಣದಲ್ಲಿ ಕನ್ನಡಪರ ಸಂಘಟನೆಗಳ ಜೊತೆ ಸಿಎಂ ಸಿದ್ದರಾಮಯ್ಯ ಮಾತುಕತೆ ನಡೆಸಿ ನಾಡಧ್ವಜ ಸಮಿತಿ ನೀಡಿದ್ದ ನಾಡಧ್ವಜವನ್ನೆ ಸರ್ವಾನುಮತದಿಂದ ಅಂಗೀಕಾರ ಮಾಡಲಾಗಿತ್ತು.
ಬಳಿಕ ಸುದ್ದಿಗೋಷ್ಠಿ ನಡೆಸಿದ ಸಿಎಂ ಸಿದ್ದರಾಮಯ್ಯ ನೂತನ ನಾಡಧ್ವಜವನ್ನ ಅನಾವರಣಗೊಳಿಸಿದ್ರು. ಹಳದಿ, ಬಿಳಿ ಮಧ್ಯೆ ಕರ್ನಾಟಕ ಸರ್ಕಾರದ ಲಾಂಛನ ಕೆಂಪು ಬಣ್ಣದ ತ್ರಿವರ್ಣ ನಾಡಧ್ವಜವನ್ನ ಸಿಎಂ ಪ್ರದರ್ಶನ ಮಾಡಿದ್ದರು.
ಹಳದಿ ಸಮೃದ್ಧಿಯ ಸಂಕೇತ, ಬಿಳಿ ಶಾಂತಿಯ ಸಂಕೇತ, ಕೆಂಪು ಸ್ವಾಭಿಮಾನ ಹಾಗೂ ಧೈರ್ಯದ ಸಂಕೇತವಾಗಿದೆ. ನಾಡಧ್ವಜ ರಚಿಸಲು ಸರ್ಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕಾರ್ಯದರ್ಶಿ ನೇತೃತ್ವದಲ್ಲಿ ಸಮಿತಿ ರಚನೆ ಮಾಡಿತ್ತು. ಸಮಿತಿ ರಾಜ್ಯದ ಇತಿಹಾಸ, ಕಾನೂನಿನ ಇತಿಮಿತಿಗಳನ್ನ ಅಧ್ಯಯನ ಮಾಡಿ 3 ಬಣ್ಣಗಳ ಧ್ವಜ ನೀಡಿತ್ತು. ಸರ್ಕಾರ ಇದನ್ನ ಒಪ್ಪಿಕೊಂಡು, ನಾಡಧ್ವಜವಾಗಿ ಅಂಗೀಕಾರ ಮಾಡಿದೆ. ಶೀಘ್ರವೇ ನಾಡಧ್ವಜ ಅಂಗೀಕಾರ ಮಾಡುವಂತೆ ಕೇಂದ್ರಕ್ಕೆ ಕಳಿಸಲಾಗುತ್ತೆ ಅಂತ ಸಿಎಂ ಸಿದ್ದರಾಮಯ್ಯ ತಿಳಿಸಿದ್ದರು.
ಸಭೆಯಲ್ಲಿ ಕರವೇ ರಾಜ್ಯಾಧ್ಯಕ್ಷ ನಾರಾಯಣಗೌಡ, ಪ್ರವೀಣ್ ಶೆಟ್ಟಿ, ಸೇರಿದಂತೆ ಹಲವು ಕನ್ನಡ ಪರ ಸಂಘಟನೆಗಳು, ಚಂದ್ರಶೇಖರ ಕಂಬಾರ, ಚಂಪಾ ಸೇರಿದಂತೆ ಹಲವು ಸಾಹಿತಿಗಳು ಭಾಗವಹಿಸಿ ನಾಡಧ್ವಜಕ್ಕೆ ಸರ್ವಾನುಮತದಿಂದ ಒಪ್ಪಿಗೆ ನೀಡಿದ್ದರು.