ಬೆಂಗಳೂರು: ಹೆಣ್ಣಿನ ಮನೋಬಲ ದೃಢವಾಗಿದ್ದು, ಸಾಮಾಜಿಕ ಮತ್ತು ಆರ್ಥಿಕವಾಗಿ ಈಗ ಬದಲಾಗಿದ್ದಾಳೆ ಎಂದು ಸಣ್ಣ ಕೈಗಾರಿಕೆ ಮತ್ತು ಸಕ್ಕರೆ ಖಾತೆಯ ಸಚಿವೆ ಗೀತಾ ಮಹಾದೇವ ಪ್ರಸಾದ್ ತಿಳಿಸಿದ್ದಾರೆ.
ಮೈಸೂರು ರಸ್ತೆಯ ರಾಜರಾಜೇಶ್ವರಿ ಗ್ರೂಪ್ ಆಫ್ ಇನ್ಸ್ ಟ್ಯೂಷನ್ ನಲ್ಲಿ ನಡೆದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು, ಹಿಂದೆ ಹೆಣ್ಣಿನ ಸಾಧನೆ ಅಡ್ಡಿಯಾಗುತಿತ್ತು. ಆದರೆ ಈಗ ತನ್ನ ಎಲ್ಲ ಸಂಕೋಲೆಗಳಿಂದ ಬಿಡಿಸಿಕೊಂಡು ಸಾಧನೆ ಮಾಡಿದ್ದಾಳೆ ಎಂದು ಹೇಳಿದರು.
ಪೈಲೆಟ್, ಟ್ರೈನ್ ಡ್ರೈವರ್, ಬಾಹ್ಯಾಕಾಶದಲ್ಲಿ ಸೇರಿದಂತೆ ಎಲ್ಲ ಕ್ಷೇತ್ರದಲ್ಲಿ ಹೆಣ್ಣು ತನ್ನ ಛಾಪನ್ನು ಮೂಡಿಸಿದ್ದಾಳೆ. ಹೆಣ್ಣಿನಿಂದಾಗಿ ಈ ಕುಟುಂಬಗಳು ಬದಲಾಗುತ್ತಿದ್ದು, ಈ ಮೂಲಕ ದೇಶದ ಅಭಿವೃದ್ಧಿಗೆ ನೆರವಾಗುತ್ತಿದ್ದಾಳೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ವಿದ್ಯಾರ್ಥಿಗಳು ಕೆಂಪು ಮತ್ತು ಹಳದಿ ಬಣ್ಣದ ಬಟ್ಟೆಯನ್ನು ಧರಿಸಿ ನಿಂತುಕೊಳ್ಳುವ ಮೂಲಕ ಕರ್ನಾಟಕ ಧ್ವಜವನ್ನು ನಿರ್ಮಿಸಿದ್ದರು.