ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮವೊಂದರಲ್ಲಿ ಹಿರಿಯ ಖಳ ನಟ ಅವರ ಸುಧೀರ್ ಮಗ ನಟ ಮತ್ತು ನಿರ್ದೇಶಕ ತರುಣ್ ಸುಧೀರ್ ಕಣ್ಣೀರಿಟ್ಟಿದ್ದಾರೆ.
ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ನಂ 1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದ ಎರಡನೇ ಸಂಚಿಕೆ ಭಾನುವಾರ ಪ್ರಸಾರವಾಗಿದೆ. ಈ ಎರಡನೇ ಸಂಚಿಕೆಯಲ್ಲಿ ನಟ ಶರಣ್, ಚಿಕ್ಕಣ್ಣ ಮತ್ತು ನಿರ್ದೇಶಕ ತರುಣ್ ಸುಧೀರ್ ಭಾಗಿಯಾಗಿದ್ದರು. ಶರಣ್, ಚಿಕ್ಕಣ್ಣ, ತರುಣ್ ಸುಧೀರ್ ಅವರ ಸಂಚಿಕೆ ತುಂಬ ನಗು ಇತ್ತು. ಆದರೆ ಕೊನೆಯ ಸುತ್ತಿನಲ್ಲಿ ಶಿವಣ್ಣನ ಒಂದು ಪ್ರಶ್ನೆಗೆ ಉತ್ತರಿಸುತ್ತ ತರುಣ್ ಸುಧೀರ್ ಕಣ್ಣೀರು ಹಾಕಿದ್ದಾರೆ.
ಕಾರ್ಯಕ್ರಮದಲ್ಲಿ `ನಿಮ್ಮ ಜೀವನದ ದೊಡ್ಡ ಮಿಸ್ಟೇಕ್ ಏನು?’ ಎಂದು ಶಿವಣ್ಣ ಅತಿಥಿಯಾಗಿ ಬಂದಿದ್ದ ತರುಣ್ ಸುಧೀರ್‍ಗೆ ಪ್ರಶ್ನೆಯನ್ನು ಕೇಳಿದ್ದಾರೆ. ಆಗ ಆ ಪ್ರಶ್ನೆಗೆ ಉತ್ತರಿಸಲು ಶುರು ಮಾಡಿದ ತರುಣ್ ಭಾವುಕರಾಗಿ, “ನಮ್ಮ ತಂದೆ ಇರಬೇಕಾದರೆ ಅವರ ಬೆಲೆ ನಮಗೆ ಗೊತ್ತಿರಲಿಲ್ಲ” ಎಂದು ಹೇಳಿ ಮುಂದೆ ಏನು ಮಾತನಾಡಲಾಗದೆ ತಂದೆಯನ್ನು ನೆನೆದು ಕಣ್ಣೀರು ಹಾಕಿದರು.
“ನಮಗೆ ಅವರು ತುಂಬ ಹತ್ತಿರ ಆದವರು. ನಾನು ಅವರ ಜೊತೆಗೆ ಸಿನಿಮಾ ಸಹ ಮಾಡಿದ್ದೇನೆ. ಅಪ್ಪಾಜಿಗೆ ಅವರು ಆಪ್ತರಾಗಿದ್ದರು. ಯಾವಾಗಲೂ ಊಟ ಮಾಡುವಾಗ ಅವರನ್ನು ಕರೆಯುತ್ತಿದ್ದರು. ಅವರು ಈಗ ಇದ್ದಿದ್ದರೆ ನಿಮ್ಮನ್ನು ನೋಡಿ ತುಂಬ ಖುಷಿ ಪಡುತ್ತಿದ್ದರು” ಎಂದು ತರುಣ್ ರನ್ನು ಶಿವಣ್ಣ ಸಮಾಧಾನ ಮಾಡಿದ್ದಾರೆ. ಈ ವೇಳೆ ಶಿವಣ್ಣ ನಮ್ಮ ಹುಡುಗಾಟದಲ್ಲಿ ಏನೋ ಮಾಡಿರುತ್ತೇವೆ. ನಮಗೂ ಹಾಗೆ ಆಗಿದೆ. ಆದರೆ ಬರುತ್ತಾ ಬುರತ್ತಾ ಅವರ ಬೆಲೆ ಗೊತ್ತಾಯಿತು ಎಂದು ಹೇಳಿ ತಮ್ಮ ತಂದೆ ರಾಜ್ ಕುಮಾರ್ ಅವರನ್ನು ನೆನೆದರು.
“ನೀವು ಸಾಯುವುದಕ್ಕೂ ಮುಂಚೆ ಏನನ್ನು ಸಾಧಿಸಬೇಕು?” ಎಂದು ಶಿವಣ್ಣ ಮತ್ತೆ ಒಂದು ಪ್ರಶ್ನೆ ಕೇಳಿದ್ದಾರೆ. ಆಗ ತರುಣ್ ಸಿನಿಮಾ ಬಗ್ಗೆ ಅಲ್ಲ. ವೈಯಕ್ತಿಕವಾಗಿ ಅಂದರೆ ನನಗೆ ಒಂದೇ ಒಂದು ಆಸೆ ಇದೆ. ನಾನು ಇರುವಷ್ಟು ದಿನ ಯಾವುದೇ ಕಷ್ಟ ಆಗದಂತೆ ನಮ್ಮ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದು ಹೇಳಿದ್ದಾರೆ.
ಖ್ಯಾತ ಖಳ ನಟ ಸುಧೀರ್ ಅವರ ಮಗನಾಗಿರುವ ತರುಣ್ ಸುಧೀರ್ ಇಂದು ಒಬ್ಬ ನಿರ್ದೇಶಕನಾಗಿ ಗುರುತಿಸಿಕೊಂಡಿದ್ದಾರೆ. ಸುಧೀರ್ ಅವರ ಇಬ್ಬರು ಮಕ್ಕಳಾದ ತರುಣ್ ಸುಧೀರ್ ಮತ್ತು ನಂದಕಿಶೋರ್ ಅಪ್ಪನ ಹೆಸರನ್ನು ಉಳಿಸಿದ್ದಾರೆ. ಆದರೆ ತಂದೆ ಇದ್ದಾಗ ಅವರ ಬೆಲೆ ನಮಗೆ ತಿಳಿಯಲಿಲ್ಲ ಎನ್ನುವ ನೋವು ತರುಣ್ ಅವರಿಗೆ ಇಂದಿಗೂ ಕಾಡುತ್ತಿದೆ.